ಅಳತೆಗೋಲು ಬದಲಾಯಿತು, ಬದುಕು ಕಳೆದುಕೊಂಡಿತು
ಹಿರಿಯರು ಹೇಳುತ್ತಿದ್ದ ಆ ಮಾತು ಇಂದಿಗೂ ಕಿವಿಯಲ್ಲಿ ಮಾರ್ದನಿಸುತ್ತದೆ: "ಮಕ್ಕಳಿರಲವ್ವ
ಮನೆ ತುಂಬಾ, ತುಳುಕುವ ನಗೆಯಲಿ ಬದುಕು ಬಂಗಾರ." ಅಂದು
ಮನೆ ಮಂದಿಯೆಲ್ಲಾ ಒಂದೆಡೆ ಸೇರಿ ಹಂಚಿಕೊಳ್ಳುತ್ತಿದ್ದ ಊಟದಲ್ಲಿ, ಮಕ್ಕಳ
ತುಂಟಾಟದಲ್ಲಿ ಮತ್ತು ಹಿರಿಯರ ಅನುಭವದ ಮಾತುಗಳಲ್ಲಿ ಬದುಕಿನ ಸಾರ್ಥಕತೆ ಅಡಗಿತ್ತು. ನೆರೆಹೊರೆಯವರು
ಭೇಟಿಯಾದಾಗ ಕೇಳುತ್ತಿದ್ದ ಮೊದಲ ಪ್ರಶ್ನೆ, "ಮಕ್ಕಳೇ
ಹೇಗಿದ್ದಾರೆ? ಎಷ್ಟು ಮಂದಿ?" ಎಂಬುದಾಗಿತ್ತು.
ಆ ಪ್ರಶ್ನೆಯಲ್ಲಿ ಮಮತೆಯಿತ್ತು, ಮನುಷ್ಯತ್ವವಿತ್ತು.
ಕಾಲದ
ಚಕ್ರ ಉರುಳಿದೆ. ಮನುಷ್ಯನ ಅಳತೆಗೋಲು ಸಂಪೂರ್ಣವಾಗಿ ಬದಲಾಗಿದೆ. ವ್ಯಕ್ತಿಯನ್ನು ಭೇಟಿಯಾದಾಗ
ಕೇಳುವ ಪ್ರಶ್ನೆಯ ಸ್ವರೂಪವೇ ಭಿನ್ನ; "ನಿಮ್ಮ
ಆಸ್ತಿಪಾಸ್ತಿ ಎಷ್ಟು? ಎಷ್ಟು ಸೈಟುಗಳಿವೆ? ಬ್ಯಾಂಕ್
ಬ್ಯಾಲೆನ್ಸ್ ಎಷ್ಟಿದೆ?" ಎಂಬ ಪ್ರಶ್ನೆಗಳು ಮನುಷ್ಯನ
ಯೋಗ್ಯತೆಯನ್ನು ನಿರ್ಧರಿಸುತ್ತಿವೆ. ಈ ಬದಲಾವಣೆ ಭೌತಿಕವಾದುದಲ್ಲದೆ, ಸಾಂಸ್ಕೃತಿಕ
ಬೇರುಗಳನ್ನೇ ಕಿತ್ತುಹಾಕುತ್ತಿರುವ ಒಂದು ಅಪಾಯಕಾರಿ ಬೆಳವಣಿಗೆಯಾಗಿದೆ.
ಸಮಾಜವು
ಮನುಷ್ಯನ ಅಂತರಂಗದ ಮೌಲ್ಯಗಳಿಗಿಂತ ಆತನ ಆರ್ಥಿಕ ಸ್ಥಿತಿಗತಿಯನ್ನೇ ಮುಖ್ಯವಾಗಿ ನೋಡುತ್ತಿದೆ. ಮಗು
ಹುಟ್ಟಿದಾಗ ಪೋಷಕರು ಅದನ್ನು 'ದೈವದ ಕೊಡುಗೆ' ಎಂದು ಕೊಂಡಾಡುವ ಬದಲಿಗೆ, "ಮುಂದಿನ ದಿನಗಳಲ್ಲಿ ನಮಗೆ
ಆಸರೆಯಾಗುತ್ತದೆಯೇ?" ಅಥವಾ "ಇದರ ವಿದ್ಯಾಭ್ಯಾಸಕ್ಕೆ
ಎಷ್ಟು ಖರ್ಚಾಗುತ್ತದೆ?" ಎಂಬ ಲೆಕ್ಕಾಚಾರದಲ್ಲಿ ಬಿದ್ದಿದ್ದಾರೆ.
ಮಕ್ಕಳನ್ನು ಪ್ರೀತಿಯಿಂದ ಬೆಳೆಸುವ ಬದಲು, ಬಂಡವಾಳದಂತೆ ಕಾಣುವ
ಪ್ರವೃತ್ತಿ ಹೆಚ್ಚಾಗಿದೆ.
ನಮ್ಮ
ಹಿರಿಯರು ಆಸ್ತಿ ಮಾಡುವುದಕ್ಕಿಂತ ಹೆಚ್ಚಾಗಿ ಸಂಸ್ಕಾರಕ್ಕೆ ಒತ್ತು ನೀಡುತ್ತಿದ್ದರು. ಮಕ್ಕಳನ್ನು
ಶ್ರೀಮಂತರನ್ನಾಗಿ ಮಾಡುವ ಬದಲು, ಸುಸಂಸ್ಕೃತರನ್ನಾಗಿ ಮಾಡಲು
ಶ್ರಮಿಸುತ್ತಿದ್ದರು. ಆದರೆ, ಆಸ್ತಿಯೇ ಜೀವನದ ಏಕೈಕ ಗುರಿಯಾಗಿದೆ.
ಹಣವಿದ್ದರೆ ಮಾತ್ರ ಗೌರವ, ಹಣವಿದ್ದರೆ ಮಾತ್ರ ಸಂಬಂಧಗಳು ಎಂಬಂತಹ ಕಟು
ಸತ್ಯವನ್ನು ಸಮಾಜವೇ ಸೃಷ್ಟಿಸಿದೆ. ಈ ಆಸ್ತಿಯ ಹಪಾಹಪಿಯಲ್ಲಿ ಮನುಷ್ಯ ತನ್ನ ಸಂಬಂಧಗಳ ಬಂಧವನ್ನು
ಕಳೆದುಕೊಂಡು ಏಕಾಂಗಿಯಾಗುತ್ತಿದ್ದಾನೆ.
ಒಬ್ಬ
ವ್ಯಕ್ತಿ ಆರ್ಥಿಕವಾಗಿ ಅಷ್ಟು ಸಬಲನಾಗಿರದಿದ್ದರೂ, ಆತನ ಮನೆ ಮಕ್ಕಳು ಮತ್ತು
ಮೊಮ್ಮಕ್ಕಳಿಂದ ತುಂಬಿರುತ್ತಿತ್ತು. ಅಂತಹ ಮನೆಯೇ ಶ್ರೀಮಂತ ಮನೆ ಎಂದು ಕರೆಯಲ್ಪಡುತ್ತಿತ್ತು. ಪರಿಸ್ಥಿತಿ
ತಲೆಕೆಳಗಾಗಿದೆ. ದೊಡ್ಡ ಅರಮನೆಯಂತಹ ಮನೆಗಳಿದ್ದರೂ, ಅಲ್ಲಿ ಆಡುವ
ಮಕ್ಕಳಿಲ್ಲ, ಹಿರಿಯರ ಜೊತೆ ಕಥೆ ಹೇಳುವವರಿಲ್ಲ. ಆಸ್ತಿಗಾಗಿ ಸಹೋದರರ
ನಡುವೆ ಜಗಳ, ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುವ ಕ್ರೌರ್ಯ
ಇಂದು ಸುದ್ದಿಯಾಗುತ್ತದೆ.
ಈ
ಬದಲಾವಣೆಗಳು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಆಸ್ತಿ ಎಂಬುದು ಇಂದು ಸಂತೋಷದ
ಮೂಲವಾಗಿಲ್ಲ, ಅಶಾಂತಿಯ ಕಾರಣವಾಗಿದೆ. ಹಣದ ಹಿಂದೆ ಬಿದ್ದು ಕಳೆದುಕೊಳ್ಳುತ್ತಿರುವುದು
ನೆಮ್ಮದಿಯನ್ನು. ಆಸ್ತಿ ಇರಬಹುದು, ಕರಗಬಹುದು. ಆದರೆ ಗಳಿಸಿದ
ಸಂಬಂಧಗಳು? ಬಿತ್ತಿದ ಪ್ರೀತಿ ಮಾತ್ರ ಅಂತಿಮ ದಿನಗಳಲ್ಲಿ
ಆಸರೆಯಾಗುವುದು. ಹಣದಿಂದ ಹಾಸಿಗೆಯನ್ನು ಕೊಳ್ಳಬಹುದು, ಆದರೆ ನಿದ್ರೆಯನ್ನಲ್ಲ,
ಮರೆಯಬಾರದು.
ಪೋಷಕರು ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುವ ನೆಪದಲ್ಲಿ, ಅವರಲ್ಲಿನ ಮನುಷ್ಯತ್ವವನ್ನೇ ಬಲಿ ಕೊಡುತ್ತಿದ್ದಾರೆ. ಮಕ್ಕಳಲ್ಲಿ ಅಂಕಗಳಿಕೆಯ
ಹುಚ್ಚನ್ನು ತುಂಬುವ, ಅವರಲ್ಲಿ ಮಾನವೀಯತೆ, ಕರುಣೆ
ಮತ್ತು ಪರಸ್ಪರ ಸಹಕಾರದ ಮೌಲ್ಯಗಳನ್ನು ಕಲಿಸಲು ಮರೆತಿದ್ದೇವೆ. ಆಸ್ತಿಯೇ ಬದುಕಿನ ಅಳತೆಗೋಲು
ಎಂದು ಬೆಳೆದ ಮಗು, ತನ್ನ ತಂದೆ-ತಾಯಿಯನ್ನು ಹೇಗೆ ಕಾಣಬಹುದು
ಎಂಬುದನ್ನು ನಾವು ಯೋಚಿಸಬೇಕು.
ಆತ್ಮಾವಲೋಕನ
ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಆಸ್ತಿಯ ವ್ಯಾಮೋಹವನ್ನು ಕಡಿಮೆ ಮಾಡಿ, ಸಂಬಂಧಗಳನ್ನು ಗಟ್ಟಿಗೊಳಿಸೋಣ. ಬದುಕನ್ನು ಆಸ್ತಿಯಿಂದ ಅಳೆಯುವ ಅಜ್ಞಾನವನ್ನು ಬಿಟ್ಟು,
ಮನುಷ್ಯತ್ವದಿಂದ ಅಳೆಯುವ ವಿವೇಕವನ್ನು ಬೆಳೆಸಿಕೊಳ್ಳೋಣ. ಆಗ ಮಾತ್ರ ಕಳೆದುಕೊಂಡ
ಆ ನಗುಮಯವಾದ ಮನೆಗಳನ್ನು, ಮಮತೆಯ ಸಂಬಂಧಗಳನ್ನು ಮರಳಿ ಪಡೆಯಲು ಸಾಧ್ಯ.
ಬರಹ:
- ಕಿರಣ್ ದಾನಿ (ರಣಗಲ್ ನ್ಯೂಸ್ ಸಂಸ್ಥಾಪಕರು)
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
