Old Hospital/New Hospital

 ಹೊಸ ಆಸ್ಪತ್ರೆ ಇದೆ, ಆದ್ರೆ ಬಾಗಿಲು ತೆರೆದಿಲ್ಲ! ಹಳೆಯ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ.

ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ 100 ಹಾಸಿಗೆಯ ತಾಯಿ ಮತ್ತು ನವಜಾತ ಶಿಶುಗಳ ಸುಸಜ್ಜಿತ ಆಸ್ಪತ್ರೆಯನ್ನು ಆಗಿನ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿದ್ದರು. ಆದರೆ, ಇವತ್ತಿಗೂ ಕೂಡ ಈ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ಕಟ್ಟಿದ ಈ ಕಟ್ಟಡ ಇನ್ನೂ ಕಾರ್ಯಾರಂಭಗೊಂಡಿಲ್ಲ ಎಂಬುದು ವಿಪರ್ಯಾಸ."

ಇನ್ನೊಂದೆಡೆ, ಪಟ್ಟಣದ ಮಧ್ಯದಲ್ಲಿರುವ ಹಳೆಯ ಸಾರ್ವಜನಿಕ ಆಸ್ಪತ್ರೆಯ ಸ್ಥಿತಿ ಹೇಳತೀರದಾಗಿದೆ. ಇಲ್ಲಿ ಪ್ರತಿದಿನ ಸುಮಾರು 300ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಸೀಮಿತ ಸೌಲಭ್ಯಗಳಿರುವ ಈ ಆಸ್ಪತ್ರೆಯಲ್ಲೇ ತುರ್ತು ಚಿಕಿತ್ಸೆ, ಹೆರಿಗೆ ಸೇರಿದಂತೆ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ವಿಪರೀತವಾಗಿದೆ."

ತಾಯಿ ಮತ್ತು ನವಜಾತ ಶಿಶುಗಳಿಗಾಗಿಯೇ ಪ್ರತ್ಯೇಕವಾಗಿ 100 ಹಾಸಿಗೆಯ ಹೈಟೆಕ್ ಆಸ್ಪತ್ರೆಯನ್ನು ಕಟ್ಟಲಾಗಿದೆ. ಒಂದು ವೇಳೆ ಹೊಸ ಆಸ್ಪತ್ರೆ ಕಾರ್ಯಾರಂಭಗೊಂಡಿದ್ದರೆ, ಈ ಹಳೆಯ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗುತ್ತಿತ್ತು. ಆದರೆ, ಹೊಸ ಕಟ್ಟಡ ಮಾತ್ರ ಜನರ ಸೇವೆಗೆ ಬಾರದೆ ಬರೀ ನಾಮಫಲಕಕ್ಕೆ ಸೀಮಿತವಾಗಿದೆ."

ಈ ವಿಚಾರದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೌನ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. 50 ಕೋಟಿ ಹಣ ಖರ್ಚು ಮಾಡಿ, ಸೌಲಭ್ಯಗಳಿದ್ದರೂ ಬಡ ರೋಗಿಗಳು ಮೂಲಭೂತ ಚಿಕಿತ್ಸೆಗಾಗಿ ಇಂದಿಗೂ ಪರದಾಡುವ ಪರಿಸ್ಥಿತಿ ಉಂಟಾಗಿದೆ."

ಕಟ್ಟಡ ನಿರ್ಮಾಣಕ್ಕೆ ತೋರಿಸಿದ ಆಸಕ್ತಿ, ಕಾರ್ಯಾರಂಭಗೊಳಿಸುವಲ್ಲಿ ಏಕೆ ಇಲ್ಲ? ಅಧಿಕಾರಿಗಳೇ ಮತ್ತು ಶಾಸಕರೇ, ಇನ್ನಾದರೂ ಎಚ್ಚೆತ್ತುಕೊಳ್ಳಿ. ಕೂಡಲೇ ತಾಯಿ ಮತ್ತು ನವಜಾತ ಶಿಶು ಆಸ್ಪತ್ರೆಯನ್ನು ಜನರ ಸೇವೆಗೆ ಮುಕ್ತಗೊಳಿಸಿ.

ಬರಹ:

- ಕಿರಣ್  ದಾನಿ   (ರಣಗಲ್ ನ್ಯೂಸ್ ಸಂಸ್ಥಾಪಕರು)

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026


Post a Comment

Previous Post Next Post