ಗೋಧೂಳಿ

 ಗೋಧೂಳಿ ಸಮಯ

ಸೂರ್ಯ ಪಶ್ಚಿಮದೆಡೆ ಬೆಟ್ಟದಾಚೆ

ನಿಶ್ಶಬ್ಧವಾಗಿ ಕರುಗುತ್ತಲಿದ್ದನು

ರಾಸುಗಳ ಹೆಜ್ಜೆಯ ಸದ್ದಿನ ಹಿಂದೆ

ಬದುಕಿನ ಬಂಡಿ ನೆಮ್ಮದಿಯಾಗಿ ಸಾಗುತಿತ್ತು ॥

 

ದಿನವಿಡೀ ದೇಹ ದಣಿದಿದ್ದರೂ

ಮನದೊಳಗಿತ್ತು ಮಣ್ಣಿನ ಶಾಂತಿ;

ಬೆವರ ಹನಿಗಳಲ್ಲೇ ಕಂಡವನು

ನಿರಾಳ ಬದುಕು, ನಿಜ ಸಂಪತ್ತು ॥

 

ಅದು, ಶ್ರಮದ ನೆಮ್ಮದಿಯ ಜೀವನ!

ಪರೋಪಕಾರಿ ಸಾರ್ಥಕತನದ

ಕಾಯಕದಲ್ಲೇ ತಪಸ್ಸು ಕಂಡವನು

ಭೂಮಿತಾಯಿಯೇ ದೇವರೆಂದು ನಮಿಸಿದವ ॥

 

ಆಸರೆಯೇ ಉಸಿರಿಗೆ ಕೈಕೋಲು

ಕುಟುಂಬದ ಭರವಸೆಯೂ ಇತ್ತು

ಇಡುವ ಮುಂದಿನ ದೃಢ ಹೆಜ್ಜೆಗಳಲ್ಲಿ

ನಾಳೆಯ ಬದುಕಿನ ಹೊಂಗನಸಿತ್ತು ॥

 

ಗೋಧೂಳಿ ಸಮಯದ ಬೆಳಕಿನೊಳಗೆ

ಅವನ ನೆರಳು ಬೆಳೆಯುತಿತ್ತು

ಆ ನೆರಳಿನಷ್ಟು ಉದ್ದವಾಗಿದ್ದವು

ಅವನ ಮೌನದ ಅನುಭವಗಳು ॥

 

ನಗರ ಗದ್ದಲದ ಗೋಜುಗಳಾಚೆ

ಸರಳ ಬದುಕಿನ ಸಾಧಕ ಅವನು

ತನ್ನ ಹೊಟ್ಟೆಗಿಂತ ಮೊದಲೇ

ಮೂಕಜೀವಿಗಳ ಹೊಟ್ಟೆ ತುಂಬಿಸುವವ ॥

 

ಮನೆಸೇರುವ ಕನಸೊತ್ತು ದಾರಿಯಲ್ಲಿ...

ಅವನ ಬದುಕೆ ಕಾವ್ಯವಾಗಿತ್ತು

ಅವನ ಕಾಯಕವೇ ಗೀತೆಯಾಗಿತ್ತು

ಯೋಗಿಯಂತೆ ಸಾಗಿದ ಮೌನದಲ್ಲಿ ॥

               ~

ಬರಹ:

✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639



All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

Post a Comment

Previous Post Next Post