Bangaluru;
"ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ (ಜಿಪಂ) ಮತ್ತು ಜಿಲ್ಲಾಡಳಿತದ
ಆಶ್ರಯದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು,
ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಹಾವಳಿ ತಡೆಗಟ್ಟಲು ಎಲ್ಲರೂ ಒಗ್ಗಟ್ಟಾಗಿ
ಶ್ರಮಿಸಬೇಕು ಎಂದು ಕರೆ ನೀಡಿದರು.
ಯುವ
ಪೀಳಿಗೆ ಮಾದಕ ದ್ರವ್ಯಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ಕಾನೂನು
ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶಾಲಾ, ಕಾಲೇಜುಗಳ ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ದ್ರವ್ಯಗಳ ಮಾರಾಟ ಅಥವಾ
ಸೇವನೆ ಕಂಡುಬಂದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಕೇವಲ ಅಧಿಕಾರಿಗಳ ಮೇಲೆ
ಅವಲಂಬಿತರಾಗದೆ, ಸಾರ್ವಜನಿಕರೂ ಜಾಗೃತರಾಗಿ ಮಾಹಿತಿಯನ್ನು
ಒದಗಿಸಬೇಕು."
ಮಾದಕ ದ್ರವ್ಯ ಮುಕ್ತ ಕರ್ನಾಟಕದತ್ತ ಹೆಜ್ಜೆ: ಜವಾಬ್ದಾರಿಯುತ
ಸಮಾಜ ನಿರ್ಮಾಣಕ್ಕೆ ಸಂಕಲ್ಪ;
ನಮ್ಮ
ರಾಜ್ಯದ ಯುವಶಕ್ತಿ ದೇಶದ ಆಸ್ತಿ. ಆದರೆ ಇಂದು ದುರದೃಷ್ಟವಶಾತ್ ಮಾದಕ ದ್ರವ್ಯದ ದಳ್ಳುರಿ ಯುವಕರ
ಭವಿಷ್ಯವನ್ನು ನುಂಗಿ ಹಾಕುತ್ತಿದೆ. ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲಾ
ಉಸ್ತುವಾರಿ ಸಚಿವರು ಮಾದಕ ದ್ರವ್ಯ ಮುಕ್ತ ಸಮಾಜದ ಕುರಿತು ನೀಡಿರುವ ಕರೆಯನ್ನು ನಾವು ಗಂಭೀರವಾಗಿ
ಪರಿಗಣಿಸಬೇಕಿದೆ.
ಕಾನೂನಿನ ತೊಡಕುಗಳು: ಮಾದಕ
ದ್ರವ್ಯ ಸೇವನೆ ಮತ್ತು ಮಾರಾಟವು 'ಎನ್‌ಡಿಪಿಎಸ್ ಕಾಯಿದೆ'
(NDPS Act - Narcotic Drugs and Psychotropic Substances Act) ಅಡಿಯಲ್ಲಿ
ಬರುವ ಗಂಭೀರ ಅಪರಾಧವಾಗಿದೆ. ಇದರಲ್ಲಿ ಸಿಲುಕಿದವರಿಗೆ ಕನಿಷ್ಠ 6
ತಿಂಗಳಿನಿಂದ ಹಿಡಿದು ಗರಿಷ್ಠ 20 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು
ಭಾರೀ ದಂಡ ವಿಧಿಸಲಾಗುತ್ತದೆ. ಈ ಶಿಕ್ಷೆಯು ಒಬ್ಬ ವ್ಯಕ್ತಿಯ ವೃತ್ತಿ ಜೀವನ ಮತ್ತು ಭವಿಷ್ಯದ
ಮೇಲೆ ಶಾಶ್ವತ ಕಲೆ ಹಾಕುತ್ತದೆ.
ಸರ್ಕಾರದ ಜವಾಬ್ದಾರಿ:
ಕಟ್ಟುನಿಟ್ಟಿನ ಕಾವಲು: ಶೈಕ್ಷಣಿಕ
ಸಂಸ್ಥೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಸಿಸಿಟಿವಿ ಕಣ್ಗಾವಲು ಮತ್ತು ನಿಯಮಿತ ದಾಳಿ
ನಡೆಸುವಿಕೆ.
ಪುನರ್ವಸತಿ ಕೇಂದ್ರಗಳು: ವ್ಯಸನಿಗಳನ್ನು
ಹೊರತರಲು ಸರ್ಕಾರಿ ಮಟ್ಟದ ಉಚಿತ ಪುನರ್ವಸತಿ ಕೇಂದ್ರಗಳ ಬಲವರ್ಧನೆ.
ಅರಿವು ಕಾರ್ಯಕ್ರಮ: ಸರ್ಕಾರಿ
ಶಾಲೆ-ಕಾಲೇಜುಗಳಲ್ಲಿ ಮಾದಕ ದ್ರವ್ಯದ ಅಪಾಯಗಳ ಕುರಿತು ನಿರಂತರ ಕಾರ್ಯಾಗಾರಗಳು.
ಸಾರ್ವಜನಿಕರ ಜವಾಬ್ದಾರಿ:
ನಿಗಾ ವಹಿಸಿ: ಸುತ್ತಮುತ್ತ
ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಅಥವಾ
ಸಹಾಯವಾಣಿಗೆ ಮಾಹಿತಿ ನೀಡಿ.
ಸಂವಾದ: ಮನೆಯಲ್ಲಿ
ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ, ಅವರ ಬದಲಾವಣೆಗಳನ್ನು
ಗಮನಿಸಿ.
ಒಗ್ಗಟ್ಟು: ಸಂಘ-ಸಂಸ್ಥೆಗಳು ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿ.
ಮಾದಕ ದ್ರವ್ಯ ಮುಕ್ತ ಕರ್ನಾಟಕವು ಕೇವಲ ಸರ್ಕಾರದ ಘೋಷಣೆಯಾಗಬಾರದು; ಅದು ಪ್ರತಿ ನಾಗರಿಕನ ಸಂಕಲ್ಪವಾಗಬೇಕು.
ಬರಹ:
- ಕಿರಣ್ ದಾನಿ (ರಣಗಲ್ ನ್ಯೂಜ್ ಸಂಸ್ಥಾಪಕರು)
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
(Source: News Report)

