ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ,
ಎನ್ನ
ಹಾನಿ-ವೃದ್ಧಿ ನಿಮ್ಮದಯ್ಯಾ,
ಎನ್ನ
ಮಾನಾಪಮಾನವೂ ನಿಮ್ಮದಯ್ಯಾ,
ಬಳ್ಳಿಗೆ
ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ.
~ ಬಸವಣ್ಣನವರು
ಬಸವಣ್ಣನವರ ವಚನ ಸಾಹಿತ್ಯವು ಭಕ್ತಿಯ ಅಭಿವ್ಯಕ್ತಿಯಲ್ಲದೆ; ಮನುಷ್ಯನ ಅಹಂಕಾರವನ್ನು ಕರಗಿಸುವ ಮತ್ತು ಅಸ್ತಿತ್ವದ ಮೂಲಸತ್ಯವನ್ನು ದರ್ಶಿಸುವ ಒಂದು ಮಹಾನ್ ದಾರ್ಶನಿಕ ದಾಖಲೆ. "ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ" ಮನುಷ್ಯನ ಇಡೀ ಬದುಕಿನ ಜವಾಬ್ದಾರಿಯನ್ನು ಸೃಷ್ಟಿಕರ್ತನಿಗೆ ಅರ್ಪಿಸುವ ಪರಮೋಚ್ಚ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆಧುನಿಕ ಜಗತ್ತಿನ ವೈಯಕ್ತಿಕ ಸಾಧನೆಗಳ ಬೆನ್ನಟ್ಟುವ ಧಾವಂತದಲ್ಲಿ, ನಮಗೆ ಆತ್ಮಾವಲೋಕನದ ಕನ್ನಡಿಯಾಗಿದೆ.
ಬದುಕಿನ
ಹಾನಿ-ವೃದ್ಧಿ, ಮಾನ-ಅಪಮಾನಗಳೆಲ್ಲವೂ ದೈವೀ ಸಂಕಲ್ಪದ ಭಾಗ ಎಂದು
ಸ್ವೀಕರಿಸುವುದು ಸಾಮಾನ್ಯ ವಿಷಯವಲ್ಲ. ವ್ಯಕ್ತಿಯೊಬ್ಬ ತನ್ನ ಇಂದ್ರೀಯಗಳ ಮಿತಿಗಳನ್ನು ಮೀರಿ
ನಿಲ್ಲುವ ಸ್ಥಿತಿಯಾಗಿದೆ. ಅಹಂಕಾರದ ನಾಶ ಮತ್ತು ಶರಣಾಗತಿಯ ನಡುವಿನ ತೆಳು ರೇಖೆಯನ್ನು ಅತ್ಯಂತ
ಸ್ಪಷ್ಟವಾಗಿ ವಿವರಿಸುತ್ತದೆ.
"ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲಸಂಗಮದೇವಾ" ಅತ್ಯಂತ ಆಳವಾದ ಅರ್ಥವನ್ನು ಹೊಂದಿದೆ. ಬಳ್ಳಿಯು ಬೆಳೆಯುವುದು ಮತ್ತು
ಅದಕ್ಕೆ ಕಾಯಿ ಬಿಡುವುದು ಅದರ ಸಹಜ ಕ್ರಿಯೆ, ಅದರ ಹಿಂದೆ ಇರುವ ಅಗೋಚರ
ಶಕ್ತಿಯನ್ನು ಮನುಷ್ಯ ಮರೆಯುತ್ತಾನೆ. ವೈಜ್ಞಾನಿಕವಾಗಿ ಹೇಳುವುದಾದರೆ, ಸಸ್ಯವೊಂದು
ಬೆಳೆಯಲು ಸೂರ್ಯನ ಬೆಳಕು, ಮಣ್ಣಿನ ಪೋಷಕಾಂಶಗಳು ಮತ್ತು ನೀರಿನ
ಅಗತ್ಯವಿರುತ್ತದೆ. ಇವುಗಳ ಸಂಯೋಜನೆಯನ್ನು ಒಂದು ಜೀವಿ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು
ಸಾಧ್ಯವಿಲ್ಲ.
ಜೀವನದಲ್ಲಿ
ಸಾಧಿಸುವ ಪ್ರತಿ ಯಶಸ್ಸಿನ ಹಿಂದೆಯೂ ಇಂತಹ ಅಗೋಚರ ಶಕ್ತಿಗಳ ಹಸ್ತಕ್ಷೇಪವಿದೆ. ಅಹಂಕಾರವೇ ಸಾಧನೆ
ಎಂದು ಬೀಗುವ ಮನುಷ್ಯ, ಬಳ್ಳಿಯ ಮೇಲಿರುವ ಹಣ್ಣು
ತನ್ನ ಸಾಧನೆ ಎಂದು ಭ್ರಮಿಸುವಂತಿದೆ. ಆ ಬಳ್ಳಿ ಮತ್ತು ಫಲ ಎರಡಕ್ಕೂ ಮೂಲಾಧಾರವನ್ನು ಆ ಶಕ್ತಿಯೇ
ಕಲ್ಪಿಸಿಕೊಟ್ಟಿರುತ್ತದೆ ಎಂಬ ಸತ್ಯವನ್ನು ಅರಿತಾಗ ವ್ಯಕ್ತಿಯು ವಿನಯಶೀಲನಾಗುತ್ತಾನೆ.
ಆಧುನಿಕ
ಮನೋವಿಜ್ಞಾನದ ಪ್ರಕಾರ, ಮನುಷ್ಯನ
ಮಾನಸಿಕ ಆರೋಗ್ಯವು ಆತನ ಯಶಸ್ಸಿನ ಸೋಲು-ಗೆಲುವುಗಳನ್ನು ಸ್ವೀಕರಿಸುವ ಮನಸ್ಥಿತಿಯ ಮೇಲೆ
ಅವಲಂಬಿತವಾಗಿರುತ್ತದೆ. ವೃತ್ತಿಜೀವನದಲ್ಲಿನ ಹಿನ್ನಡೆ (ಹಾನಿ) ಅಥವಾ ಉನ್ನತಿ (ವೃದ್ಧಿ)
ಇವುಗಳನ್ನು ತನ್ನ ಸ್ವಂತಿಕೆಯ ಅಳತೆಯೆಂದು ಭಾವಿಸುವ ವ್ಯಕ್ತಿ ಸದಾ ಒತ್ತಡದಲ್ಲಿರುತ್ತಾನೆ. ಇವೆಲ್ಲವೂ
ಕಾಲದ ಅನಿವಾರ್ಯತೆ ಎಂದು ತಿಳಿದಾಗ, ಮಾನಸಿಕ ನೆಮ್ಮದಿ
ಲಭಿಸುತ್ತದೆ.
ಕಠಿಣ
ಸನ್ನಿವೇಶಗಳಲ್ಲಿ ಕೂಡ ಸ್ಥಿತಪ್ರಜ್ಞರಾಗಿರುವ ವ್ಯಕ್ತಿಗಳು ದೀರ್ಘಕಾಲಿಕ ಯಶಸ್ಸನ್ನು
ಸಾಧಿಸುತ್ತಾರೆ. ತಮ್ಮ ಪ್ರತಿ ಸೋಲು ಮತ್ತು ಗೆಲುವಿಗೆ ತಾವೇ ಹೊಣೆಗಾರರು ಎಂಬ ಅತಿಯಾದ ಹೊರೆ
ಇಲ್ಲದಿದ್ದಾಗ, ವ್ಯಕ್ತಿಯ ಕಾರ್ಯಕ್ಷಮತೆ ಹೆಚ್ಚುತ್ತದೆ. ವಚನವು
ನಮಗೆ ಕಲಿಸುವುದು ಇದೇ ಸ್ಥಿತಪ್ರಜ್ಞೆಯನ್ನು – ಫಲಿತಾಂಶದ ಒತ್ತಡವಿಲ್ಲದ ಕರ್ತವ್ಯದ ನಿರ್ವಹಣೆ.
ಸಮಾಜದಲ್ಲಿ
ಮಾನ-ಅಪಮಾನಗಳು ವ್ಯಕ್ತಿಯ ಪ್ರತಿಷ್ಠೆಯನ್ನು ನಿರ್ಧರಿಸುತ್ತವೆ ಎಂಬುದು ಕಟು ವಾಸ್ತವ. ಆದರೆ, ಶರಣರ ದೃಷ್ಟಿಯಲ್ಲಿ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಯಾರೊ ಹೊಗಳಿದಾಗ
ಉಬ್ಬದಿರುವುದು ಮತ್ತು ತೆಗಳಿದಾಗ ಕುಗ್ಗದಿರುವುದು ಸಮಚಿತ್ತದ ಸಂಕೇತ. ಇವೆರಡನ್ನೂ
ಕೂಡಲಸಂಗಮದೇವನಿಗೆ ಅರ್ಪಿಸುವ ಮೂಲಕ, ಪ್ರಶಂಸೆ ಮತ್ತು
ಟೀಕೆಗಳೆರಡರಿಂದಲೂ ಮುಕ್ತರಾಗುತ್ತಾರೆ.
ಪತ್ರಿಕೋದ್ಯಮದ
ಇತಿಹಾಸದಲ್ಲಿ, ಕಠಿಣ ಸತ್ಯಗಳನ್ನು ಹೇಳಿ ಅಪಮಾನಿತರಾದವರೇ ಬದುಕಿನ
ಸತ್ಯವನ್ನು ಕಂಡುಕೊಂಡಿದ್ದಾರೆ. ಸತ್ಯದ ಹಾದಿಯಲ್ಲಿ ನಡೆಯುವಾಗ ಬರುವ ಅಪಮಾನಗಳು ಶರಣರ ಪಾಲಿಗೆ ಕಠಿಣ
ಪರೀಕ್ಷೆಗಳೇ. ಇವುಗಳನ್ನು ದೈವೀ ಪ್ರಕ್ರಿಯೆಯ ಭಾಗವೆಂದು ಭಾವಿಸಿದಾಗ, ವ್ಯಕ್ತಿಯಲ್ಲಿ
ಭಯದ ಲವಲೇಶವೂ ಇರುವುದಿಲ್ಲ.
ಅಹಂಕಾರದಿಂದ
ಮುಕ್ತರಾಗುವ ಕರೆಯನ್ನು ಈ ವಚನ ನೀಡುತ್ತದೆ. ಮಾಡುವ ಕೆಲಸಗಳಲ್ಲಿನ ಫಲಿತಾಂಶವನ್ನು ದೈವಕ್ಕೆ
ಅರ್ಪಿಸುವುದು ಎಂದರೆ ಕೆಲಸ ಮಾಡುವುದನ್ನು ಬಿಡುವುದಲ್ಲ; ಕೆಲಸದ
ಫಲಿತಾಂಶದ ಮೇಲೆ ಅತಿಯಾದ ವ್ಯಾಮೋಹ ಇಟ್ಟುಕೊಳ್ಳದಿರುವುದು. ಇದೇ ಕರ್ಮಯೋಗದ ಮೂಲತತ್ವ.
ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯೂ, ಕೆಲಸದ ಹಿರಿಮೆಯನ್ನು ಅಹಂಗೆ ಸೇರಿಸಿಕೊಳ್ಳಬಾರದು. ಸಮರ್ಪಣಾ ಭಾವದಿಂದ ಮಾಡಿದ ಕೆಲಸವು ವ್ಯರ್ಥವಾಗುವುದಿಲ್ಲ. ವ್ಯಕ್ತಿಯು ಅಹಂಕಾರವನ್ನು ತ್ಯಜಿಸಿ, ಸಮಾಜಕ್ಕೆ ತನ್ನನ್ನು ತಾನು ಸಮರ್ಪಿಸಿಕೊಂಡಾಗ ಮಾತ್ರ, ಸಮಾಜ ಸುಸ್ಥಿರವಾದ ಬೆಳವಣಿಗೆಯನ್ನು ಕಾಣಲು ಸಾಧ್ಯ.
ಮೂಲ; ಬಸವಣ್ಣ
ವಿಮರ್ಶಾತ್ಮಕ ಬರಹ
- ಕಿರಣ್ ದಾನಿ (ರಣಗಲ್ ನ್ಯೂಸ್ ಸಂಸ್ಥಾಪಕರು)
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
