ಅಟಲ್ ಜಿ ಹಾಗೂ ಜಾರ್ಜ್ ಫರ್ನಾಂಡಿಸ್,

ಸ್ವತಂತ್ರ ಭಾರತದ ಕರಾಳ ಅಧ್ಯಾಯ;

ಇತಿಹಾಸ ನಮಗಿಂದು ಮೌನವಾಗಿ ಪಾಠ ಹೇಳುತ್ತದೆ,  ಸ್ವಾತಂತ್ರ್ಯದ ಬೆಲೆ ಸದಾ ಜಾಗೃತಿಯೇ;

"ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧನಕ್ಕೊಳಗಾದ ಅಟಲ್ ಜಿ ಹಾಗೂ ಜಾರ್ಜ್ ಫರ್ನಾಂಡಿಸ್,ಪ್ರಜಾಪ್ರಭುತ್ವದ ಕರಾಳ ಅಧ್ಯಾಯದ ಸಂಕೇತಾತ್ಮಕ ದೃಶ್ಯ."

"ಬೇಡಿಗಳು ಕೈಗಳನ್ನು ಕಟ್ಟಬಹುದು; ಆದರೆ ಸ್ವಾತಂತ್ರ್ಯದ ಸಂಕಲ್ಪವನ್ನು ಎಂದಿಗೂ ಕಟ್ಟಲಾರವು."

                

ಜೂನ್ ಇಪ್ಪತೈದರ ಕತ್ತಲ ರಾತ್ರಿಯಲಿ,

ಪ್ರಜಾಪ್ರಭುತ್ವದ ಬುನಾದಿಯೇ ನಡುಗಿತು;

ಸ್ವಾತಂತ್ರ್ಯದ ಕೊರಳನು ಹಿಸುಕಿದರು

ಸಂವಿಧಾನದ ಮನವು ಮೌನವಾಯಿತು ॥

 

ಮಾತಿನ ಹಕ್ಕಿಗೂ ಬೀಗವು ಬಿತ್ತು,

ಪತ್ರಿಕಾ ಸ್ವಾತಂತ್ರಕ್ಕೂ ಸರಪಳಿ ಸುತ್ತಿತು;

ಪ್ರಜಾಪ್ರಭುತ್ವದ ದಾರಿಯಲಿ ನಡೆದವರು,

ಬಂಧೀಖಾನೆಗಳ ಬಾಗಿಲು ಕಂಡರು ॥

 

ಪ್ರಜೆಗಳ ಹಕ್ಕಿನ ಪವಿತ್ರ ಪುಟಗಳಲಿ

ಅಧಿಕಾರದ ಅಹಂಕಾರ ತಲೆಯೆತ್ತಿ ನಿಂತಿತು;

ಪ್ರಜೆಗಳ ನಂಬಿಕೆಯ ನದಿಯ ಮೇಲೆಯೇ,

ಭಯದ ಕಾರ್ಮೋಡಗಳು ಆವರಿಸಿದವು ॥

 

ಇತಿಹಾಸ ನಮಗಿಂದು ಮೌನವಾಗಿ ಪಾಠ ಹೇಳುತ್ತದೆ,

ಸ್ವಾತಂತ್ರ್ಯದ ಬೆಲೆ ಸದಾ ಜಾಗೃತಿಯೇ;

ಸಂವಿಧಾನ ನಮ್ಮ ಉಸಿರು, ನಮ್ಮ ಬಲ,

ಪ್ರಜಾಪ್ರಭುತ್ವ ಇಲ್ಲಿ ನಿತ್ಯ ಜ್ಯೋತಿಯೇ ॥

 

ಜನತೆಯ ತೀರ್ಪನು ತುಳಿದು ಮುಂದೂಡುತ್ತ,

ಅಧಿಕಾರ ವ್ಯಾಮೋಹದಲಿ ದರ್ಪ ಮೆರೆದು;

ಕೊನೆಗೂ ಗೆಲುವಿನ ಭ್ರಮೆಯಲಿ,

ಅಂದು ಚುನಾವಣೆ ಘೋಷಣೆಯಾದವು ॥

 

ಆದರೇನು! ಮತಪೆಟ್ಟಿಗೆಯಲಿ ಜನಾಕ್ರೋಶ ಸಿಡಿಯಿತು,

ಮೌನದ ಭಾಷೆಯಲ್ಲೇ ಮಾತಾಡಿತು,

ಪ್ರಜಾಪ್ರಭುತ್ವದ ಜ್ಯೋತಿಯು,

ಫಳಫಳನೆ ಮತ್ತೊಮ್ಮೆ ಬೆಳಗಿತು ॥

 

ಅಧಿಕಾರ ಶಾಶ್ವತವೆಂಬ ಭ್ರಮೆ ಕಳಚಿ,

ಜನಾದೇಶದ ತೀರ್ಪಿನಲಿ ಕರಗಿಹೋಯಿತು;

ಪ್ರಜಾಸತ್ತೆಯ ಮುಂದೆ

ಅಹಂಕಾರ ದರ್ಪಗಳು ತಲೆ ಬಾಗಿದವು ॥

 

ಕರಾಳ ಪುಟಗಳು ಎಂದೂ ತೆರೆಯದಿರಲಿ,

ಮೂಲಭೂತ ಹಕ್ಕಿನ ಹೂಗಳು ಮತ್ತೆಂದೂ ಬಾಡದಿರಲಿ;

ಜನತೆಯ ಜಾಗೃತಿಯ ಕಾವಲಿನಲ್ಲಿ

ಭಾರತದ ಆತ್ಮ—ಪ್ರಜಾಸ್ವಾಮ್ಯ ಶಾಶ್ವತ ಬೆಳಗಿರಲಿ ॥

                   

👉 ಸ್ವತಂತ್ರ ಭಾರತದ ಇತಿಹಾಸದ ಕರಾಳ ಅಧ್ಯಾಯದ ಮೆಲುಕು.

                                         **

ಬರಹ:

✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026


Post a Comment

Previous Post Next Post