ಮತದಾರರ ಪಟ್ಟಿ ಪರಿಷ್ಕರಣೆ:

 ಎನ್ಯೂಮರೇಷನ್ ಫಾರಂ ಕಡ್ಡಾಯ

ಅಧಿಕಾರಿಗಳು (BLO) ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ: ಬೂತ್ ಮಟ್ಟದಲ್ಲಿ ಬಿಎಲ್ಒ-ಬಿಎಲ್ಎ ಸಮನ್ವಯ ಅತ್ಯಗತ್ಯ – ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

ಕುಷ್ಟಗಿ: ಪ್ರಜಾಪ್ರಭುತ್ವದ ಬುನಾದಿಯಾದ ಮತದಾರರ ಪಟ್ಟಿಯನ್ನು ಸಂಪೂರ್ಣ ದೋಷರಹಿತವಾಗಿ ಸಿದ್ಧಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳು (BLO) ಮತ್ತು ಬೂತ್ ಲೆವೆಲ್ ಏಜೆಂಟರು (BLA) ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಕರೆ ನೀಡಿದರು.

ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ಬೂತ್ ಲೆವೆಲ್ ಏಜೆಂಟರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಪ್ರಮುಖ ಅಂಶಗಳು:

ಎನ್ಯೂಮರೇಷನ್ ಫಾರಂ ಕಡ್ಡಾಯ: ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರಿಯಬೇಕಾದರೆ ಎನ್ಯೂಮರೇಷನ್ ಫಾರಂ ಭರ್ತಿ ಮಾಡುವುದು ಕಡ್ಡಾಯ. ಈ ಫಾರಂ ಸಲ್ಲಿಸದಿದ್ದರೆ ಮತದಾರರ ವಿವರ ಪರಿಶೀಲನೆಗೆ ಅಡಚಣೆಯಾಗುತ್ತದೆ. ಆದ್ದರಿಂದ, ಪ್ರತಿ ಅರ್ಹ ಮತದಾರರಿಗೂ ಫಾರಂ ತಲುಪಿಸಿ ಅದನ್ನು ಭರ್ತಿ ಮಾಡಿಸುವುದು ನಮ್ಮ ಆದ್ಯತೆಯಾಗಬೇಕು.

ಮನೆ ಮನೆ ಭೇಟಿ: ಪ್ರತಿ ಬೂತ್ ಮಟ್ಟದ ಅಧಿಕಾರಿಗಳು (BLO) ಕನಿಷ್ಠ ಮೂರು ಬಾರಿ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಅರ್ಹ ಮತದಾರರು ಮೊದಲ ಭೇಟಿಯ ವೇಳೆ ಮನೆಯಲ್ಲಿ ಇಲ್ಲದಿದ್ದರೆ, ಮರುಭೇಟಿ ನೀಡುವ ಮೂಲಕ ಯಾವುದೇ ಹೆಸರು ಪಟ್ಟಿಯಿಂದ ಕೈತಪ್ಪದಂತೆ ನೋಡಿಕೊಳ್ಳಬೇಕು.

ಅನರ್ಹರ ಹೆಸರು ಕೈಬಿಡಿ: ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಜತೆಗೆ, ಅನರ್ಹ ವ್ಯಕ್ತಿಗಳ ಹೆಸರು ಪಟ್ಟಿಯಲ್ಲಿ ಉಳಿಯದಂತೆ ಕಟ್ಟುನಿಟ್ಟಾದ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೇಲ್ವಿಚಾರಣೆ: ಕಾರ್ಯಚಟುವಟಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಪ್ರತಿ 10 ಮಂದಿ BLOಗಳಿಗೆ ಒಬ್ಬ ಸೂಪರ್‌ವೈಸರ್ ಅನ್ನು ನೇಮಕ ಮಾಡಲಾಗಿದೆ. ಕಾರ್ಯದಲ್ಲಿ ಯಾವುದೇ ಸಮಸ್ಯೆ ಎದುರಾದರೂ ತಕ್ಷಣವೇ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಪರಿಹಾರಕ್ಕೆ ಒತ್ತು:

ಈ ತರಬೇತಿ ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ತರಬೇತಿಯನ್ನು ನಡೆಸಿಕೊಟ್ಟರು. ಏಜೆಂಟರಲ್ಲಿದ್ದ ಗೊಂದಲಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳೇ ಖುದ್ದಾಗಿ ಮುತುವರ್ಜಿ ವಹಿಸಿದ್ದು ವಿಶೇಷವಾಗಿತ್ತು.

ಭಾರತದಲ್ಲಿ ಇದುವರೆಗೆ ಏಳು ಬಾರಿ ಮತದಾರರ ಪಟ್ಟಿ ಪರಿಷ್ಕರಣೆಯಾಗಿದ್ದು, ಈ ಬಾರಿಯ ಪರಿಷ್ಕರಣೆ ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಆಶಿಸಿದರು.

ಬರಹ:

- ಕಿರಣ್ ದಾನಿ (ರಣಗಲ್ ನ್ಯೂಜ್ ಸಂಸ್ಥಾಪಕರು)

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026



Post a Comment

Previous Post Next Post