ಗದ್ದಲದ ನಡುವೆ ಕುಷ್ಟಗಿ ರೈಲು ನಿಲ್ದಾಣ ಉದ್ಘಾಟನೆಗೊಂಡು ವರ್ಷ ಪೂರೈಸಿದೆ. ಆದರೆ, ಈ ಭಾಗದ ಜನರ ಪಾಲಿಗೆ ರೈಲು ಹಳಿಗಳು ಕನಸಿನ ಗೆರೆಗಳಾಗಿಯೇ ಉಳಿದಿವೆ. ವರ್ಷ ಕಳೆದರೂ ನಿಲ್ದಾಣಕ್ಕೆ ಬಂದದ್ದು ಒಂದೇ ಒಂದು ರೈಲು! ಅದು ಕೂಡ ಹೊಸತಲ್ಲ, ಬೇರೆ ಭಾಗಗಳಲ್ಲಿ ಓಡಿ ಮೂಲೆಗುಂಪಾಗಿದ್ದ ಹಳೆಯ ಡಬ್ಬಿಗಳ ಮೂಟೆ. ರೈಲಿನ ಬಗ್ಗೆ ಕೇಳಿಬರುತ್ತಿರುವ ಅತಿ ದೊಡ್ಡ ದೂರು ಎಂದರೆ ದರ ಮತ್ತು ವೇಗ. ನಿಯಮದ ಪ್ರಕಾರ, ಯಾವುದೇ ಹೊಸ ಮಾರ್ಗದ ರೈಲನ್ನು ಆರಂಭದಲ್ಲಿ 'ಸಾಮಾನ್ಯ ರೈಲು' (General/Passenger Train) ಎಂದು ಓಡಿಸುವುದು ವಾಡಿಕೆ. ಆದರೆ ಕುಷ್ಟಗಿ-ಹುಬ್ಬಳ್ಳಿ ಮಾರ್ಗದಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ಎಕ್ಸ್‌ಪ್ರೆಸ್ ರೈಲಿನ ಸರಾಸರಿ ವೇಗ ಕನಿಷ್ಠ 55 kmph ಇರಬೇಕು. ಆದರೆ ಈ ರೈಲು 40 kmph ವೇಗದಲ್ಲಿ ಅಂಬೆಗಾಲಿಡುತ್ತಿದೆ. ಪ್ಯಾಸೆಂಜರ್ ವೇಗದಲ್ಲಿ ಚಲಿಸುವ ಈ ರೈಲಿಗೆ ರೈಲ್ವೆ ಇಲಾಖೆ 'ಎಕ್ಸ್‌ಪ್ರೆಸ್' ದರವನ್ನು ವಿಧಿಸುತ್ತಿದೆ. ಇದು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ತಂತ್ರವಲ್ಲದೆ ಮತ್ತೇನು? ದಕ್ಷಿಣ ಕರ್ನಾಟಕದ ಅಥವಾ ಬೇರೆ ರಾಜ್ಯಗಳ ಮಾರ್ಗಗಳಲ್ಲಿ ಅತ್ಯಾಧುನಿಕ ಬೋಗಿಗಳಿರುವ ರೈಲುಗಳನ್ನು ಓಡಿಸುವ ಇಲಾಖೆ, ಈ ಭಾಗಕ್ಕೆ ಗುಜರಿ ಸೇರಬೇಕಾದ ಹಳೆಯ ಬೋಗಿಗಳನ್ನು ಕಳುಹಿಸುತ್ತಿದೆ. ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಮತ್ತು ಉತ್ತರ ಕರ್ನಾಟಕಕ್ಕೆ ಮೀಸಲಿಟ್ಟ ಹೊಸ ರೈಲುಗಳು ಎಲ್ಲಿ ಹೋದವು? ಈ ಭಾಗದ ಜನರನ್ನು ಕೆಳಮಟ್ಟದಿಂದ ನೋಡುವ ಈ ತಾರತಮ್ಯದ ದೃಷ್ಟಿಕೋನಕ್ಕೆ ಕೊನೆ ಎಂದು? ರೈಲ್ವೆ ಇಲಾಖೆಯ ಮೇಲೆ ಒತ್ತಡ ಹೇರಿ, ಹೆಚ್ಚಿನ ರೈಲುಗಳನ್ನು ತರುವಲ್ಲಿ ಮತ್ತು ದರ ಕಡಿತಗೊಳಿಸುವಲ್ಲಿ ಈ ಭಾಗದ ನಾಯಕರು,ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಒಂದು ನಾಡಿನ ಅಥವಾ ತಾಲೂಕಿನ ಅಭಿವೃದ್ಧಿಯ ಹಿಂದೆ ಜನಸಾಮಾನ್ಯರ ಪ್ರಾಮಾಣಿಕ ಹೋರಾಟದ ಶಕ್ತಿಯಿರುತ್ತದೆ. ಇಂತಹ ಜನಪರ ಹೋರಾಟಗಳು ದೀರ್ಘಕಾಲದವರೆಗೆ ತನ್ನ ಹರಿತವನ್ನು ಉಳಿಸಿಕೊಳ್ಳಬೇಕಾದರೆ, ಹೋರಾಟದ ಸಮಿತಿಗಳು ಆಡಳಿತ ಮತ್ತು ರಾಜಕೀಯ ಶಕ್ತಿಗಳಿಂದ ನಿರ್ದಿಷ್ಟ 'ಗೌರವಯುತ ಅಂತರ' ಕಾಯ್ದುಕೊಳ್ಳುವುದು ಅಗತ್ಯವೇ ಎಂಬ ಪ್ರಶ್ನೆ ಮೂಡುತ್ತಿದೆ.ಯಾವುದೇ ಒಂದು ಸಮಿತಿಯಲ್ಲಿ ಜನಪ್ರತಿನಿಧಿಗಳು ಪ್ರಮುಖ ಸ್ಥಾನಗಳಲ್ಲಿದ್ದಾಗ, ಆ ಸಮಿತಿಯು ಸರ್ಕಾರದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಲು ಸಂಕೋಚ ಪಡಬಹುದು. ಯಾಕೆಂದರೆ, ಯಾರ ವಿರುದ್ಧ ಹೋರಾಟ ಮಾಡಬೇಕೋ, ಅವರೇ ಸಮಿತಿಯ ಚುಕ್ಕಾಣಿ ಹಿಡಿದಾಗ ಹೋರಾಟದ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದು ವ್ಯಕ್ತಿಯ ವಿರುದ್ಧದ ದನಿಯಲ್ಲ, ಹೋರಾಟದ 'ಸ್ವಾಯತ್ತತೆ'ಯ ಪ್ರಶ್ನೆ. ಹೋರಾಟದ ಸಮಿತಿಗಳು ರಾಜಕೀಯ ಮುಖಂಡರಿಗೆ ಗೌರವ ನೀಡಲಿ, ಅವರ ಮಾರ್ಗದರ್ಶನ ಪಡೆಯಲಿ. ಆದರೆ, ಸಮಿತಿಯ ಪದಾಧಿಕಾರಿಗಳ ಸ್ಥಾನದಲ್ಲಿ ಜನಸಾಮಾನ್ಯರು, ನಿವೃತ್ತ ಅಧಿಕಾರಿಗಳು ಅಥವಾ ತಜ್ಞರು ಇದ್ದಾಗ ಸರ್ಕಾರವನ್ನು ಮತ್ತು ಜನಪ್ರತಿನಿಧಿಗಳನ್ನು ನೇರವಾಗಿ ಪ್ರಶ್ನಿಸುವ ಶಕ್ತಿ ಸಮಿತಿಗೆ ಬರುತ್ತದೆ.ಜನಪ್ರತಿನಿಧಿಗಳು ಸಮಿತಿಯ 'ಅತಿಥಿ'ಗಳಾಗಿರಬೇಕೇ ಹೊರತು, 'ಪದಾಧಿಕಾರಿ'ಗಳಾಗುವುದು ಹೋರಾಟದ ಮೂಲ ಉದ್ದೇಶಕ್ಕೆ ಅಡ್ಡಿಯಾಗಬಹುದು. ರೈಲ್ವೆ ಹೋರಾಟವು ಪ್ರತಿ ಪ್ರಜೆಯ ಹಕ್ಕು. ಪಕ್ಷಗಳ ಹಂಗಿರಬಾರದು. ಸಮಿತಿಯ ನೇತೃತ್ವವು ರಾಜಕೀಯ ಮುಖಂಡರ ಕೈಯಲ್ಲಿದ್ದಾಗ, ಒಂದು ಪಕ್ಷದ ಪರ ಅಥವಾ ಇನ್ನೊಂದು ಪಕ್ಷದ ವಿರುದ್ಧ ಎಂಬ ಹಣೆಪಟ್ಟಿ ಹಚ್ಚಿಸಿಕೊಳ್ಳುವ ಅಪಾಯವಿರುತ್ತದೆ. ಇದು ಹೋರಾಟದ ಪವಿತ್ರತೆಯನ್ನು ಕುಂದಿಸಬಹುದು. ನಮಗೆ ಬೇಕಿರುವುದು ರೈಲು ಮತ್ತು ನಿಲ್ದಾಣದ ಅಭಿವೃದ್ಧಿ. ಈ ಹಾದಿಯಲ್ಲಿ ಹೋರಾಟಗಾರರ ಸಮಿತಿಯು ರಾಜಕೀಯ ಲೇಪನವಿಲ್ಲದೆ, ಜನರ ಧ್ವನಿಯಾಗಿ ಕೆಲಸ ಮಾಡಿದಾಗ ಮಾತ್ರ ದೆಹಲಿ ಮತ್ತು ಬೆಂಗಳೂರಿನ ಆಡಳಿತಗಾರರಿಗೆ ಬಿಸಿ ತಟ್ಟಲು ಸಾಧ್ಯ. ಮುಖಂಡರು ಹೋರಾಟಕ್ಕೆ ಬೆಂಬಲ ನೀಡಲಿ, ಆದರೆ ಹೋರಾಟದ ಚುಕ್ಕಾಣಿ ಸದಾ ಸಾಮಾನ್ಯ ಜನರ ಕೈಯಲ್ಲೇ ಇರಲಿ.
ಬರಹ:
- ಕಿರಣ್ ದಾನಿ (ರಣಗಲ್
ನ್ಯೂಸ್ ಸಂಸ್ಥಾಪಕರು)
All Rights Reserved: The complete rights of this column belong to 'Ranagal Newz'. Republishing parts or the entirety of this article without prior permission is unlawful. Copyright © 2026
.jpeg)
0 Comments:
Post a Comment