"ಅರ್ಥಶಾಸ್ತ್ರ ಮತ್ತು ರಾಜಕೀಯದ ಸಂಗಮ"
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಈ ಕರೆ—"ಒಂದು ವರ್ಷ ಚಿನ್ನ ಖರೀದಿ ಮಾಡಬೇಡಿ ಮತ್ತು ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆ
ಮಾಡಿ ಸಾರ್ವಜನಿಕ ಸಾರಿಗೆಯನ್ನು ಬಳಸಿ"—ಮೇಲ್ನೋಟಕ್ಕೆ
ಅತ್ಯಂತ ಸರಳ ಮತ್ತು ಸಾಮಾನ್ಯ ಹೇಳಿಕೆಯಂತೆ ಕಂಡರೂ, ಇದರ ಆಳದಲ್ಲಿ
ಜಾಗತಿಕ ಅರ್ಥಶಾಸ್ತ್ರ, ದೇಶದ ಆರ್ಥಿಕ ಭದ್ರತೆ ಮತ್ತು ವಿದೇಶಿ
ವಿನಿಮಯದ ರಕ್ಷಣೆ ಅಡಗಿದೆ. ಸಾಮಾನ್ಯ ಜನರಿಗೆ ಈ ಹೇಳಿಕೆಯ ಹಿಂದಿರುವ ಜಾಗತಿಕ ಮಾರುಕಟ್ಟೆಯ ಗಣಿತ
ಅರ್ಥವಾಗುತ್ತಿಲ್ಲ. ಭಾರತದಂತಹ ಬೃಹತ್ ದೇಶದ ಪ್ರಧಾನಿಯೊಬ್ಬರು ಜನರ ವೈಯಕ್ತಿಕ ಆಯ್ಕೆಗಳಾದ
ಚಿನ್ನ ಮತ್ತು ವಾಹನ ಬಳಕೆಯ ಬಗ್ಗೆ ಮಾತನಾಡಿದಾಗ ಅದರ ಹಿಂದೆ ಕೇವಲ ಸಲಹೆಯಿರುವುದಿಲ್ಲ, ಬದಲಿಗೆ ದೇಶದ ಬೊಕ್ಕಸವನ್ನು ರಕ್ಷಿಸುವ ಅನಿವಾರ್ಯತೆಯಿರುತ್ತದೆ. ಇದರ ನಿಜವಾದ
ತಿರುಳನ್ನು ನಾವು ಮೂರು ಆಯಾಮಗಳಲ್ಲಿ ಅರ್ಥಮಾಡಿಕೊಳ್ಳಬೇಕು: ಭಾರತದಲ್ಲಿ ಚಿನ್ನ ಎನ್ನುವುದು ಆಭರಣವಲ್ಲ,
ಅದೊಂದು ಭಾವನೆ. ಆದರೆ ಅರ್ಥಶಾಸ್ತ್ರದ ದೃಷ್ಟಿಯಿಂದ ಇದು "ಮೃತ ಹೂಡಿಕೆ" (Dead Investment). ಭಾರತದಲ್ಲಿ ಚಿನ್ನದ ಗಣಿಗಳು
ಅತ್ಯಂತ ಕಡಿಮೆ ಇವೆ. ಹಾಗಾಗಿ ನಾವು ಬಳಸುವ ಶೇಕಡಾ 90ಕ್ಕೂ ಹೆಚ್ಚು
ಚಿನ್ನವನ್ನು ವಿದೇಶಗಳಿಂದ (Import) ಆಮದು ಮಾಡಿಕೊಳ್ಳಬೇಕು. ವಿದೇಶಿ ವಿನಿಮಯದ ನಷ್ಟ (Forex Drain) ಇದಕ್ಕೆ ನಾವು ಪಾವತಿಸುವುದು ಅಮೆರಿಕದ ಡಾಲರ್ ರೂಪದಲ್ಲಿ! ದೇಶದ ಜನರು ಅತಿಯಾಗಿ ಚಿನ್ನ
ಕೊಂಡಾಗ, ಭಾರತದ ಬಳಿ ಇರುವ ವಿದೇಶಿ ಹಣದ ಮುಖಬೆಲೆ (Forex
Reserve) ಕರಗುತ್ತದೆ. ಇದರಿಂದ ರೂಪಾಯಿಯ ಮೌಲ್ಯ ಅಂತರಾಷ್ಟ್ರೀಯ
ಮಾರುಕಟ್ಟೆಯಲ್ಲಿ ಕುಸಿಯುತ್ತದೆ. ಒಂದು ವರ್ಷ ಚಿನ್ನ ಕೊಳ್ಳದಿದ್ದರೆ, ಆ
ಕೋಟ್ಯಂತರ ಹಣ ದೇಶದ ಒಳಗೇ ಚಲಾವಣೆಯಾಗಿ ಮೂಲಭೂತ ಸೌಕರ್ಯಗಳಿಗೆ ಬಳಕೆಯಾಗುತ್ತದೆ ಎಂಬುದು
ಮೋದಿಯವರ ಆಲೋಚನೆ. ಭಾರತ ತನಗೆ ಬೇಕಾಗುವ ಕಚ್ಚಾ ತೈಲದ (Crude Oil/Petrol/Diesel) ಶೇಕಡಾ 80ಕ್ಕೂ ಹೆಚ್ಚಿನ ಭಾಗವನ್ನು ಅರಬ್ ದೇಶಗಳಿಂದ ಆಮದು
ಮಾಡಿಕೊಳ್ಳುತ್ತದೆ. ಇಂದು ಜಾಗತಿಕ ಮಟ್ಟದಲ್ಲಿ ಯುದ್ಧಗಳು ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ
ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತಿವೆ. ಪ್ರತಿಯೊಬ್ಬರೂ ವೈಯಕ್ತಿಕ ಕಾರು, ಬೈಕ್‌ಗಳನ್ನು ಬಳಸುತ್ತಾ ಹೋದರೆ (ಜಾಗತಿಕ ಬಿಕ್ಕಟ್ಟು)
ದೇಶದ ಅರ್ಧದಷ್ಟು ಆದಾಯ ಪೆಟ್ರೋಲ್ ಕೊಳ್ಳಲು ವಿದೇಶಗಳಿಗೆ ಹರಿದು ಹೋಗುತ್ತದೆ. ಸಾರ್ವಜನಿಕ
ಸಾರಿಗೆಯನ್ನು (ಬಸ್, ಮೆಟ್ರೋ, ರೈಲು)
ಬಳಸುವುದರಿಂದ ದೇಶದ ತೈಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದು ಮಾಲಿನ್ಯ ನಿಯಂತ್ರಣಕ್ಕಾಗಿ
ಅಲ್ಲ, ದೇಶದ ಆರ್ಥಿಕತೆಯನ್ನು ಜಾಗತಿಕ ತೈಲದ ಆಘಾತಗಳಿಂದ ರಕ್ಷಿಸುವ
ರಕ್ಷಣಾ ಕವಚ. ಈ ಹೇಳಿಕೆಯಲ್ಲಿ ಒಂದು 'ಸಂಕುಲತೆ'
(Complexity) ಇದೆ. ಸಾಮಾನ್ಯ ಜನರಿಗೆ ಅನಿಸುವುದೇನೆಂದರೆ, "ನಮ್ಮ ದುಡ್ಡಿನಲ್ಲಿ ನಾವು ಚಿನ್ನ ಕೊಳ್ಳುತ್ತೇವೆ, ಪೆಟ್ರೋಲ್
ಹಾಕಿಸುತ್ತೇವೆ, ಇದಕ್ಕೆ ಸರ್ಕಾರದ ತಡೆಯೇಕೆ?" ಎಂದು. ಸಾರ್ವಜನಿಕರಿಗೆ ಇದರ 'ಸ್ಥೂಲ ಅರ್ಥಶಾಸ್ತ್ರ'
(Macroeconomics) ಅರ್ಥವಾಗುತ್ತಿಲ್ಲ. ಪ್ರಧಾನಿಯವರು ದೇಶದ ಹಿತದೃಷ್ಟಿಯಿಂದ
ದೂರದೃಷ್ಟಿಯನ್ನಿಟ್ಟು ಹೇಳಿದ್ದರೂ, ಅದನ್ನು ತಳಮಟ್ಟದ ಜನರಿಗೆ
ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರಿ ತಂತ್ರಜ್ಞಾನ ಮತ್ತು ಸ್ಥಳೀಯ ನಾಯಕರು ವಿಫಲರಾಗಿದ್ದಾರೆ. "ಚಿನ್ನ ಕೊಳ್ಳಬೇಡಿ, ವಾಹನ ಬಳಸಬೇಡಿ ಅಂದಾಗ ಜನರಿಗೆ ಕೋಪ
ಬರಬಹುದು. ಆದರೆ ಇದರ ಹಿಂದೆ ದೇಶದ ಬೊಕ್ಕಸವನ್ನು ವಿದೇಶಿ ದರೋಡೆಯಿಂದ ರಕ್ಷಿಸುವ ಗಣಿತವಿದೆ.
ನಮ್ಮ ದೇಶದ ಹಣ ಪೆಟ್ರೋಲ್ ಮತ್ತು ಹಳದಿ ಚಿನ್ನದ ರೂಪದಲ್ಲಿ ಅರಬ್ ಮತ್ತು ಪಾಶ್ಚಿಮಾತ್ಯ ದೇಶಗಳ
ಪಾಲಾಗುತ್ತಿದೆ. ಪ್ರಧಾನಿಯವರ ಕರೆಯ ಅಂತರಾಳ ಆರ್ಥಿಕತೆಯಾಗಿದೆ. ಆದರೆ, ಜನರಿಗೆ ಈ ಆಳವನ್ನು ತಲುಪಿಸುವ ಜವಾಬ್ದಾರಿ ಯಾರದ್ದು? ದೇಶ
ಉಳಿಯಬೇಕಾದರೆ ಗಡಿಯಲ್ಲಿ ಸೈನಿಕ ನಿಂತರೆ ಸಾಲದು, ದೇಶದ ಒಳಗಿರುವ
ಪ್ರಜೆಯೂ ಆರ್ಥಿಕ ಶಿಸ್ತು ಕಲಿಯಬೇಕು.
ಬರಹ:
- ಕಿರಣ್ ದಾನಿ (ರಣಗಲ್
ನ್ಯೂಸ್ ಸಂಸ್ಥಾಪಕರು)
All Rights
Reserved: The complete rights of this column belong to 'RanagalNewz'. Republishing parts or the entirety of this article without
prior permission is unlawful. Copyright © 2026

0 Comments:
Post a Comment