ಬಲ್ಡೋಟ ವಿರುದ್ಧ ರವಿಕೃಷ್ಣಾ ರೆಡ್ಡಿ ಆಕ್ರೋಶ

ದಶಕದ ಕೃಷಿ ನಷ್ಟಕ್ಕೆ ಸರ್ಕಾರವೇ ಹೊಣೆ: ಬಲ್ಡೋಟ ವಿರುದ್ಧ ರವಿಕೃಷ್ಣಾ ರೆಡ್ಡಿ ಆಕ್ರೋಶ 

ತೋಂಟದ ಶ್ರೀಗಳು ಫೋಸ್ಕೋ ಕಂಪನಿಯನ್ನು ಓಡಿಸಿದಂತೆ, ಗವಿಶ್ರೀಗಳು ಪರಿಸರ ಮತ್ತು ರೈತರ ಹಿತರಕ್ಷಣೆಗಾಗಿ ಬಲ್ಡೋಟ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕಿದೆ

ಕೊಪ್ಪಳ: "ಗದಗ ಜಿಲ್ಲೆಯ ಕಪ್ಪತ್ತಗುಡ್ಡ ಉಳಿಸಲು ಹೋರಾಡಿದ ತೋಂಟದ ಶ್ರೀಗಳ ಆದರ್ಶ ನಮಗೆ ದಾರಿದೀಪ. ಅದೇ ರೀತಿ, ಕೊಪ್ಪಳದ ಗವಿಶ್ರೀಗಳು ಬಲ್ಡೋಟ ಕಂಪನಿಯ ಮಾಲಿನ್ಯದ ವಿರುದ್ಧ ಧ್ವನಿ ಎತ್ತಿ ರೈತರ ಬದುಕು ಉಳಿಸಲು ತಪಸ್ವಿಯಂತೆ ಮುಂದೆ ಬರಬೇಕು," ಎಂದು ಕೆ.ಆರ್.ಎಸ್. ಪಕ್ಷದ ಗೌರವಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಕರೆ ನೀಡಿದರು.

ಬಲ್ಡೋಟ ಕಂಪನಿ ತೊಲಗಿಸಿ ಎಂದು ನಡೆಯುತ್ತಿರುವ ನಿರಂತರ ಹೋರಾಟದ 250ನೇ ದಿನದ ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು 20 ವರ್ಷಗಳಿಂದ ಕಾರ್ಖಾನೆಗಳ ಮಾಲಿನ್ಯಕ್ಕೆ 22 ಹಳ್ಳಿಗಳ ಕೃಷಿ ಬದುಕು ಬಲಿಯಾಗಿದೆ. ಈ ನಷ್ಟದ ಹೊಣೆ ಯಾರು? ಕೃಷಿ ಇಲಾಖೆ ಮೌನವಾಗಿರುವುದು ಯಾಕೆ?" ಎಂದು ಪ್ರಶ್ನಿಸಿದ ಅವರು, ತಕ್ಷಣವೇ ನಷ್ಟದ ಸಮೀಕ್ಷೆ ನಡೆಸಿ ಸರ್ಕಾರ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಗವಿಶ್ರೀಗಳಿಗೆ ಹೋರಾಟದ ಕರೆ; "ಧರ್ಮ ಪೀಠ ಮತ್ತು ಧರ್ಮ ಗುರುಗಳು ಜನರಿಗಾಗಿ ಇರಬೇಕು. ನಾಡಿಗೆ, ನೆಲಕ್ಕೆ ಕುತ್ತು ಬಂದಾಗ ಹೋರಾಟಕ್ಕೆ ಇಳಿಯುವುದು ಧರ್ಮ ಗುರುಗಳ ಜವಾಬ್ದಾರಿ. ತೋಂಟದ ಶ್ರೀಗಳು ಫೋಸ್ಕೋ ಕಂಪನಿಯನ್ನು ಓಡಿಸಿದಂತೆ, ಗವಿಶ್ರೀಗಳು ಪರಿಸರ ಮತ್ತು ರೈತರ ಹಿತರಕ್ಷಣೆಗಾಗಿ ಬಲ್ಡೋಟ ವಿರುದ್ಧ ಗಟ್ಟಿ ಧ್ವನಿ ಎತ್ತಬೇಕಿದೆ" ಎಂದು ಮನವಿ ಮಾಡಿದರು.

ಕಿವುಡಾದ ಇಲಾಖೆಗಳಿಗೆ 'ಸಪ್ಪಳ'ದ ಬಿಸಿ; ಪ್ರತಿಭಟನೆಯ ಅಂಗವಾಗಿ 'ಕೊಪ್ಪಳ ಸಪ್ಪಳ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೋರಾಟಗಾರರು ತಟ್ಟೆ ಬಾರಿಸುತ್ತಾ, ವಾದ್ಯಗಳನ್ನು ನುಡಿಸುತ್ತಾ ನಗರದ ಅಶೋಕ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ಕಿವಿ ತೆರೆಸಲು ಪ್ರಯತ್ನಿಸಿದರು. "ಬಲ್ಡೋಟ ತೊಲಗಲಿ, ಕೊಪ್ಪಳ ಉಳಿಯಲಿ" ಎಂಬ ಘೋಷಣೆಗಳು ಮೊಳಗಿದವು. ರೈತ ಸಂಪರ್ಕ ಕೇಂದ್ರದ ಮುಂದೆ ನಡೆದ ಪ್ರತಿಭಟನೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು, ತಮ್ಮ ಹಕ್ಕಿಗಾಗಿ ಕೊನೆಯವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕೆ.ಆರ್.ಎಸ್. ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಆಶಾ ವೀರೇಶ, ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಬಿ.ಗೋನಾಳ, ರಾಜು ಬಾಕಳೆ, ಮಂಜುನಾಥ ಜಿ.ಗೊಂಡಬಾಳ ಸೇರಿದಂತೆ ನೂರಾರು ರೈತರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ: 

- ಕಿರಣ್ ದಾನಿ, ಸಂಪಾದಕರು, ರಣಗಲ್ ನ್ಯೂಜ್. © ಸರ್ವ ಹಕ್ಕು ಕಾಯ್ದಿರಿಸಲಾಗಿದೆ.

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026




Post a Comment

Previous Post Next Post