ಕೊಪ್ಪರಿಕೆಯ ಕೆಳಗೆ ಮಳೆ!
ಮಳೆ
ಮುನಿದ ದಿನಗಳಲ್ಲಿ
ನಮ್ಮ
ಊರಿನ ಮಕ್ಕಳಿಗೆ
ಆಕಾಶದೊಂದಿಗೆ
ಮಾತಾಡುವ
ಒಂದು
ಮುಗ್ಧ ಉಪಾಯ ಗೊತ್ತಿತ್ತು.
ತಲೆಯ
ಮೇಲೊಂದು ಕೊಪ್ಪರಿಕೆ,
ಕೊಪ್ಪರಿಕೆ
ಮೇಲೆ ಗರಿಕೆ,
ಹಿಂದೆ
ಮಕ್ಕಳ ನಗು-ಗದ್ದಲ,
ಮನೆ
ಬಾಗಿಲ ಮುಂದೆ ನಿಂತು
ಒಂದೇ
ಧ್ವನಿಯಲ್ಲಿ ಕೂಗುತ್ತಿದ್ದೆವು—
"ಗುರ್ಜಿ ಗುರ್ಜಿ ಎಲ್ಯಾಡಿ ಬಂದಿ?
ಹಳ್ಳ-ಕೊಳ್ಳ
ತಿರುಗಾಡಿ ಬಂದೆ...
ಕಾರ್
ಮಳೆಯೇ, ಕಪತ್
ಮಳೆಯೇ,
ಸುರಿ
ಮಳೆಯೇ, ಸುರಿ
ಮಳೆಯೇ...
ಸುಣ್ಣ
ಕೊಡತಿನಿ, ಸುರಿ
ಮಳೆಯೇ, ಸುರಿ
ಮಳೆಯೇ...
ಬಾ
ಮಳೆಯೇ, ಬಾ
ಮಳೆಯೇ..."
ಮನೆಯವಳು
ಚೆರಿಗೆಯ
ತುಂಬ ನೀರು ತಂದು
ಕೊಪ್ಪರಿಕೆಯ
ಮೇಲಿಂದ ಸುರಿದೊಡನೆ,
ಕೊಪ್ಪರಿಕೆ
ಹೊತ್ತವ
ಸುತ್ತು
ಹೊಡೆಯುವ ಗತಿಗೆ,
ಕೊಪ್ಪರಿಕೆಯ
ಅಂಚುಗಳಿಂದ
ನೀರು
ಚಿಮ್ಮಿ,
ಸುತ್ತಲಿದ್ದ
ಮಕ್ಕಳ ಮೇಲೆ
ಮಳೆಯ
ನಗುವಾಗಿ ಬೀಳುತ್ತಿತ್ತು.
ಆ
ಸುತ್ತಿನೊಳಗೆ
ಮಕ್ಕಳ
ಕೇಕೆ,
ನೀರಿನ
ಚಿಮ್ಮಾಟ,
ಮುಗ್ಧತೆಯ
ಕುಣಿತ,
ಮಳೆಯ
ಮೇಲಿನ ನಂಬಿಕೆ—
ಎಲ್ಲವೂ
ಒಂದಾಗಿ ಕರಗಿಬಿಡುತ್ತಿತ್ತು.
ಪ್ರತಿ
ಮನೆಯ ಅಂಗಳವೂ
ಒಂದು
ಪ್ರಾರ್ಥನೆಯಾಗಿತ್ತು.
ಪ್ರತಿ
ನಗುವೂ
ಒಂದು
ಮೋಡದ ಕರೆಯಾಗಿ ಮೊಳಗುತ್ತಿತ್ತು.
ಇಂದು
ಕೊಪ್ಪರಿಕೆ
ಇಲ್ಲ,
ಆ
ಸುತ್ತು ಇಲ್ಲ,
ಆ
ಮಕ್ಕಳ ಹಾಡಿಲ್ಲ.
ಬೋರ್‌ವೆಲ್‌ಗಳ
ಆಳ ಹೆಚ್ಚಾಗಿದೆ;
ಆದರೆ
ಮನುಷ್ಯನ
ಮನದ ಆಳ
ಬತ್ತಿದಂತಿದೆ.
ಆಕಾಶವನ್ನೇ
ಕೇಳುವ ಬದಲು
ಮೊಬೈಲ್
ಪರದೆಗಳನ್ನೇ ನೋಡುವ
ಕಾಲ
ಬಂದಿದೆ.
ಬಹುಶಃ
ಅದಕ್ಕೇ
ಮೋಡಗಳೂ
ದಾರಿ ಮರೆತಿರಬಹುದೇನೋ...
ಮತ್ತೊಮ್ಮೆ
ಯಾವ
ಮಗುವಾದರೂ
ಕೊಪ್ಪರಿಕೆ
ಹೊತ್ತು
ಊರ
ಬಾಗಿಲಿಗೆ ಬಂದರೆ,
ನಾನೂ
ಒಂದು
ಚೆರಿಗೆ ನೀರಲ್ಲ,
ನನ್ನ
ಬಾಲ್ಯದ ನೆನಪುಗಳನ್ನೇ
ಅದರ
ಮೇಲೆ ಸುರಿದುಬಿಡುವೆ—
ಹಳ್ಳ-ಕೊಳ್ಳ
ಹರಿದುಬಿಡಲೆಂದು!
*
👉 ಸೂಚನೆ:
ಈ
ಕವಿತೆ ನನ್ನ ಬಾಲ್ಯದ ನೆನಪುಗಳನ್ನು ಆಧರಿಸಿದೆ. ಕೊಪ್ಪಳ–ರಾಯಚೂರು ಭಾಗದಲ್ಲಿ ಮಳೆ ಬಾರದ
ಸಂದರ್ಭಗಳಲ್ಲಿ,
ಕೊಪ್ಪರಿಕೆ ಹೊತ್ತು ಮನೆ ಮನೆಗೆ ತೆರಳಿ ಮಳೆ ಕೋರಿ ಹಾಡುವ ಒಂದು ಜನಪದ
ಆಚರಣೆ ಪ್ರಚಲಿತದಲ್ಲಿತ್ತು. ನನ್ನ ಬಾಲ್ಯದ ನೆನಪು ಹಾಗೂ ಹಿರಿಯರ ಸ್ಮರಣೆಯ ಪ್ರಕಾರ, ಈ ಆಚರಣೆಯಲ್ಲಿ ಪರ ಊರಿನಿಂದ ಬಂದ ಬೆಸ್ತ ಸಮುದಾಯದವರೂ ಭಾಗವಹಿಸುತ್ತಿದ್ದರು.
ಮನೆಯವರು ಅವರ ಮೇಲೆ ನೀರು ಸುರಿಸಿ, ಆಹಾರ ದಾನ ಮಾಡುತ್ತಿದ್ದರು. ಈ
ದೃಶ್ಯವನ್ನು ಕಂಡು ಮಕ್ಕಳು ಅದನ್ನೇ ಆಟದ ರೂಪದಲ್ಲಿಯೂ ಅನುಕರಿಸುತ್ತಿದ್ದರು. ಈ ಕವಿತೆಯಲ್ಲಿ
ಉಲ್ಲೇಖಿಸಿರುವ ಹಾಡಿನ ಸಾಲುಗಳು ನನ್ನ ನೆನಪಿನಲ್ಲಿ ಉಳಿದಿರುವ ಜನಪದ ಗೀತೆಯ ಭಾಗಗಳಾಗಿವೆ.
----
ಬರಹ:
✍️ *ಅಮರ್ಜಾ* - ಅಮರೇಗೌಡ ಪಾಟೀಲ ಜಾಲಿಹಾಳ, - ಮೊ. 9900504639
- ಕಿರಣ್ ದಾನಿ, ಸಂಪಾದಕರು, ರಣಗಲ್ ನ್ಯೂಜ್. © ಸರ್ವ ಹಕ್ಕು ಕಾಯ್ದಿರಿಸಲಾಗಿದೆ.
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

