ಕೇರಳದಲ್ಲಿ ಸಿಗೆಲ್ಲೋಸಿಸ್ ಆತಂಕ: ಕರ್ನಾಟಕ ಆರೋಗ್ಯ ಇಲಾಖೆಯ ಅಲರ್ಟ್

ಸಿಗೆಲ್ಲೋಸಿಸ್ ಆತಂಕ: ಮಿತಿ ಮೀರಿದ ಸ್ವಚ್ಛತೆ ಮತ್ತು ನಮ್ಮ ದೇಹದ ರೋಗನಿರೋಧಕ ಶಕ್ತಿ!

ಕಾಣದ ಸತ್ಯ: ಬೀದಿ ಬದಿಯ ಜೀವನದ ವಾಸ್ತವ;

ಕೇರಳದಲ್ಲಿ ಸಿಗೆಲ್ಲೋಸಿಸ್ ಎಂಬ ಮಾರಣಾಂತಿಕ ಸೋಂಕು ವೇಗವಾಗಿ ಹರಡುತ್ತಿರುವ ವರದಿಗಳು ಕರಾವಳಿ ಕರ್ನಾಟಕ ಮತ್ತು ಗಡಿ ಜಿಲ್ಲೆಗಳ ಜನರಲ್ಲಿ ಆತಂಕವನ್ನು ಮೂಡಿಸಿವೆ. ರಾಜ್ಯ ಆರೋಗ್ಯ ಇಲಾಖೆಯು ಈ ಕುರಿತು ಎಚ್ಚೆತ್ತುಕೊಂಡಿದ್ದು, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ. ಈ ಸೋಂಕು ಎಂದರೇನು? ಇದು ಹೇಗೆ ಹರಡುತ್ತದೆ ಮತ್ತು ನಾವು ಮಾಡಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದರ ಕುರಿತು ಇಲ್ಲಿ ಸಂಪೂರ್ಣ ಮಾಹಿತಿ ಇದೆ.

ಸಿಗೆಲ್ಲೋಸಿಸ್ ಎಂದರೇನು?; ಸಿಗೆಲ್ಲೋಸಿಸ್ ಎನ್ನುವುದು 'ಸಿಗೆಲ್ಲಾ' (Shigella) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಕರುಳಿನ ಸೋಂಕು. ಇದು ಮುಖ್ಯವಾಗಿ ಕಲುಷಿತ ನೀರು ಮತ್ತು ಆಹಾರದ ಮೂಲಕ ಮನುಷ್ಯನ ದೇಹಕ್ಕೆ ಪ್ರವೇಶಿಸುತ್ತದೆ. ಈ ಬ್ಯಾಕ್ಟೀರಿಯಾಗಳು ಮನುಷ್ಯನ ಕರುಳಿನಲ್ಲಿ ವಾಸವಾಗಿ ತೀವ್ರತರವಾದ ಸೋಂಕನ್ನು ಉಂಟುಮಾಡುತ್ತವೆ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆಯದಿದ್ದರೆ, ಇದು ಜೀವಕ್ಕೆ ಅಪಾಯಕಾರಿಯಾಗಬಲ್ಲದು.

ಪ್ರಮುಖ ಲಕ್ಷಣಗಳು: ಸೋಂಕು ತಗುಲಿದ ವ್ಯಕ್ತಿಯಲ್ಲಿ ಸಾಮಾನ್ಯವಾಗಿ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತವೆ:

  • ತೀವ್ರವಾದ ಹೊಟ್ಟೆ ನೋವು.
  • ರಕ್ತಮಿಶ್ರಿತ ಭೇದಿ (Bloody diarrhea).
  • ಜ್ವರ ಮತ್ತು ಮೈಕೈ ನೋವು.
  • ವಾಕರಿಕೆ ಮತ್ತು ವಾಂತಿ.
  • ಬಳಲಿಕೆ ಮತ್ತು ನಿರ್ಜಲೀಕರಣ (Dehydration).

ಆರೋಗ್ಯ ಇಲಾಖೆಯ ತುರ್ತು ಕ್ರಮಗಳು; ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವವರ ಮೇಲೆ ನಿಗಾ ಇರಿಸಲು ರಾಜ್ಯ ಆರೋಗ್ಯ ಇಲಾಖೆಯು ನಿರ್ದೇಶನ ನೀಡಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಆರೋಗ್ಯ ತಂಡಗಳನ್ನು ಜಾಗೃತವಾಗಿರಲು ತಿಳಿಸಲಾಗಿದೆ.

ನೀರಿನ ಪರೀಕ್ಷೆ: ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷೆಗೆ ಒಳಪಡಿಸಲು ಸ್ಥಳೀಯ ಆಡಳಿತಗಳಿಗೆ ಸೂಚಿಸಲಾಗಿದೆ.

ಆಹಾರದ ಮೇಲೆ ನಿಗಾ: ಹೋಟೆಲ್‌ಗಳು ಮತ್ತು ತಳ್ಳುಗಾಡಿಗಳ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ.

ಅರಿವು ಮೂಡಿಸುವ ಕಾರ್ಯಕ್ರಮ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸಾರ್ವಜನಿಕರು ಮಾಡಬೇಕಾದ ಮುನ್ನೆಚ್ಚರಿಕೆಗಳು; ಭಯಪಡುವ ಅಗತ್ಯವಿಲ್ಲ, ಆದರೆ ಜಾಗರೂಕರಾಗಿರುವುದು ಅವಶ್ಯಕ:

  • ಸ್ವಚ್ಛತೆ: ಊಟಕ್ಕೂ ಮುನ್ನ ಮತ್ತು ಶೌಚಾಲಯ ಬಳಸಿದ ನಂತರ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆಯಿರಿ.
  • ನೀರಿನ ಬಳಕೆ: ಕುಡಿಯುವ ನೀರನ್ನು ಕಾಯಿಸಿ ಆರಿಸಿ ಬಳಸುವುದು ಅತೀ ಉತ್ತಮ. ನೀರಿನ ಟ್ಯಾಂಕ್‌ಗಳನ್ನು ಶುಚಿಯಾಗಿಡಿ.
  • ಆಹಾರ ಕ್ರಮ: ಬೀದಿ ಬದಿಯ ಅರೆಬೆಂದ ಅಥವಾ ಕಲುಷಿತ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ. ಹಣ್ಣು ಮತ್ತು ತರಕಾರಿಗಳನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು ಬಳಸಿ.
  • ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ: ಒಂದು ವೇಳೆ ಭೇದಿ ಅಥವಾ ಜ್ವರದಂತಹ ಲಕ್ಷಣಗಳು ಕಾಣಿಸಿಕೊಂಡರೆ, ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಸಹಜವಾಗಿ, ಇಂತಹ ಸುದ್ದಿಗಳು ಜನರಲ್ಲಿ ಭೀತಿಯನ್ನು ಹುಟ್ಟುಹಾಕುತ್ತವೆ ಮತ್ತು ನಾವು ಮತ್ತಷ್ಟು ಹೆಚ್ಚಿನ ಸ್ವಚ್ಛತೆಯತ್ತ (Hygiene) ಧಾವಿಸುತ್ತೇವೆ. ಆದರೆ, ಈ ಸಂದರ್ಭದಲ್ಲಿ ಒಂದಿಷ್ಟು ಗಂಭೀರವಾಗಿ ಯೋಚಿಸಬೇಕಾದ ವಿಷಯವಿದೆ.

ಸ್ವಚ್ಛತೆಯ ಅತಿರೇಕ ಮತ್ತು ಸವಾಲುಗಳು; ಆಧುನಿಕ ಜೀವನಶೈಲಿಯಲ್ಲಿ 'ಫಿಲ್ಟರ್ ನೀರು' ಮತ್ತು 'ಸ್ಯಾನಿಟೈಸ್ಡ್' ಪರಿಸರ ಎನ್ನುವುದು ಅನಿವಾರ್ಯವಾಗಿದೆ. ಆದರೆ, ಎಷ್ಟು ಹೆಚ್ಚು ಅತೀ ಜಾಗರೂಕತೆಯಿಂದ ಇರುತ್ತೇವೆಯೋ, ಅಷ್ಟು ಹೆಚ್ಚು ನಮ್ಮ ದೇಹವು ಹೊರಗಿನ ಸಣ್ಣಪುಟ್ಟ ವೈರಸ್-ಬ್ಯಾಕ್ಟೀರಿಯಾಗಳನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆಯೇ? ಫಿಲ್ಟರ್ ಇಲ್ಲದ ನೀರು ಕುಡಿದಾಗ ತಕ್ಷಣವೇ ನೆಗಡಿ, ಕೆಮ್ಮು ಅಥವಾ ಜ್ವರ ಬರುತ್ತದೆ ಎಂದರೆ, ನಮ್ಮ ದೇಹದ ರೋಗನಿರೋಧಕ ಶಕ್ತಿಯು 'ಪರಿಸರದೊಂದಿಗೆ ಹೊಂದಾಣಿಕೆ' ಮಾಡಿಕೊಳ್ಳುವುದನ್ನು ಮರೆತಿದೆಯೇ ಎಂಬ ಅನುಮಾನ ಕಾಡುತ್ತದೆ.

ಕಾಣದ ಸತ್ಯ: ಬೀದಿ ಬದಿಯ ಜೀವನದ ವಾಸ್ತವ; ನಾವು ಸಿಗೆಲ್ಲೋಸಿಸ್ ಬಗ್ಗೆ ಹೆದರುತ್ತಿದ್ದೇವೆ, ಆದರೆ ಯೋಚಿಸಿ – ನಮ್ಮ ಕಣ್ಣ ಮುಂದೆಯೇ ಇರುವ ನಿರ್ಗತಿಕರು, ಭಿಕ್ಷುಕರು ಅಥವಾ ರಸ್ತೆಯ ಅಂಚಿನಲ್ಲಿ ಬದುಕುವ ಅದೆಷ್ಟೋ ಜನರು, ಕಲುಷಿತ ನೀರಿನ ನಡುವೆ, ನೈರ್ಮಲ್ಯವಿಲ್ಲದ ಪರಿಸರದಲ್ಲಿ, ಗಟಾರುಗಳ ಪಕ್ಕದಲ್ಲಿಯೂ ಬದುಕುತ್ತಿದ್ದಾರೆ. ಅವರು ಕೈ ತೊಳೆಯದೆ ಆಹಾರ ಸೇವಿಸುತ್ತಾರೆ, ಮಳೆ ನೀರನ್ನು ಕುಡಿಯುತ್ತಾರೆ. ವೈದ್ಯಕೀಯವಾಗಿ ನೋಡಿದರೆ, ಅವರ ದೇಹವು ಆ ಬ್ಯಾಕ್ಟೀರಿಯಾಗಳ ಜೊತೆ ನಿರಂತರ ಹೋರಾಟ ನಡೆಸಿ, ಅವುಗಳ ವಿರುದ್ಧದ ಪ್ರತಿರೋಧಕ ಶಕ್ತಿಯನ್ನು (Natural Immunity) ನಿರ್ಮಿಸಿಕೊಂಡಿರಬಹುದೇ?

ವೈದ್ಯಕೀಯ ಲೋಕವು ಒಂದು ಕಡೆ ಸ್ವಚ್ಛತೆಯೇ ರಕ್ಷಾಕವಚ ಎಂದರೆ, ಮತ್ತೊಂದು ಕಡೆ ದೇಹವು ಎಷ್ಟು ಹೆಚ್ಚಿನ ಸೋಂಕುಗಳಿಗೆ ಒಡ್ಡಿಕೊಳ್ಳುತ್ತದೆಯೋ ಅಷ್ಟು ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ ಎಂದು ಹೇಳುತ್ತದೆ. ಈ ವೈರುಧ್ಯದ ನಡುವೆ, ಇಂದು ಮಿತಿ ಮೀರಿದ ಸ್ವಚ್ಛತೆಯಿಂದ ಸಹಜ ರೋಗನಿರೋಧಕ ಶಕ್ತಿಯನ್ನೇ ದುರ್ಬಲಗೊಳಿಸುತ್ತಿದ್ದೇವಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ನಿಯಂತ್ರಣ: ಮಾಡಬೇಕಾದ್ದು ಏನು?; ಸಿಗೆಲ್ಲೋಸಿಸ್‌ನಂತಹ ಸೋಂಕುಗಳ ಬಗ್ಗೆ ಜಾಗೃತರಾಗಿರುವುದು ತಪ್ಪು ಎನ್ನಲಾಗದು. ಆದರೆ, ಭಯದ ನೆರಳಲ್ಲಿ ಬದುಕುವುದಕ್ಕಿಂತ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುವುದು ಮುಖ್ಯ.

  • ಸ್ವಾಭಾವಿಕ ಬಲ: ಕೃತಕವಾದ ಶುದ್ಧೀಕರಣದ ಮೇಲೆ ಅತಿಯಾಗಿ ಅವಲಂಬಿತರಾಗುವ ಬದಲು, ತಾಜಾ ಆಹಾರ ಮತ್ತು ಸಹಜ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತಹದ್ದು.
  • ವಾಸ್ತವಿಕ ಜಾಗೃತಿ: ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತಹದ್ದು, ಆದರೆ ಅದನ್ನು ಮಹಾಮಾರಿ ಎಂದು ಭಯಪಡುವ ಬದಲು, ದೇಹದ ವ್ಯವಸ್ಥೆಯ ಭಾಗವಾಗಿ ಬರುವಂತಹದ್ದು ಎಂಬ ಅರಿವಿರಲಿ.
  • ವೈದ್ಯಕೀಯ ನೆರವು: ಸೋಂಕು ತೀವ್ರವಾದಾಗ ವೈದ್ಯರನ್ನು ಕಾಣುವುದು ಅನಿವಾರ್ಯ, ಆದರೆ ಪ್ರತಿಯೊಂದು ಸಣ್ಣ ಸೋಂಕಿಗೂ ಪ್ರತಿಜೀವಕಗಳನ್ನು (Antibiotics) ಬಳಸುವ ಮೂಲಕ ದೇಹದ ನೈಸರ್ಗಿಕ ಹೋರಾಟದ ಶಕ್ತಿಯನ್ನು ಕಡಿಮೆ ಮಾಡಿಕೊಳ್ಳದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುವುದು.

ಬಾಹ್ಯ ಸ್ವಚ್ಛತೆ ಎನ್ನುವುದು ತೋರಿಕೆ ಆಗಬಾರದು. ನಿರ್ಗತಿಕರ ಬದುಕಿನ ಗಟ್ಟಿತನವನ್ನು ಗಮನಿಸಿದರೆ, ಸ್ವಚ್ಛತೆಗಿಂತ ಮಿಗಿಲಾದ ಶಕ್ತಿ 'ರೋಗನಿರೋಧಕ ಶಕ್ತಿ'ಯಲ್ಲಿ ಇದೆ ಎಂಬುದು ಸ್ಪಷ್ಟವಾಗುತ್ತದೆ. ಆರೋಗ್ಯ ಇಲಾಖೆಯ ನಿಯಮಗಳನ್ನು ಪಾಲಿಸೋಣ, ಆದರೆ ಅದೇ ಸಮಯದಲ್ಲಿ ನಮ್ಮ ದೇಹವನ್ನು ಸಣ್ಣಪುಟ್ಟ ಸವಾಲುಗಳಿಗೆ ಅಂಜದಂತೆ ಗಟ್ಟಿಗೊಳಿಸೋಣ. ಅತೀ ಜಾಗರೂಕತೆ ಆತಂಕವನ್ನು ನೀಡಿದರೆ, ವಾಸ್ತವಿಕ ಅರಿವು ಶಕ್ತಿಯನ್ನು ನೀಡುತ್ತದೆ. ಭಯವನ್ನು ಮೀರಿ, ಆತ್ಮವಿಶ್ವಾಸದಿಂದ ಮತ್ತು ಆರೋಗ್ಯಪೂರ್ಣ ಜೀವನಶೈಲಿಯೊಂದಿಗೆ ಈ ಸವಾಲನ್ನು ಎದುರಿಸೋಣ.

ಬರಹ:

- ಕಿರಣ್  ದಾನಿ   (ರಣಗಲ್ ನ್ಯೂಸ್ ಸಂಸ್ಥಾಪಕರು)

All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026

Sorce; Sk; 



Post a Comment

Previous Post Next Post