ಮುಖ್ಯಮಂತ್ರಿಗಳೇ ಉದ್ಘಾಟಿಸಿದ್ರೂ ತೆರೆಯದ 'ತಾಯಿ-ಮಗು' ಆಸ್ಪತ್ರೆ: ಕುಷ್ಟಗಿಯಲ್ಲಿ ನಿರ್ಲಕ್ಷ್ಯದ ಪರಮಾವಧಿ!
ಕುಷ್ಟಗಿ: ತಾಲೂಕಿನ ಸಾವಿರಾರು ಬಡ ತಾಯಂದಿರ ಮತ್ತು ನವಜಾತ ಶಿಶುಗಳ
ಆರೋಗ್ಯದ ಕನಸಾಗಿ ನಿರ್ಮಾಣವಾಗಿದ್ದ ನೂರು ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಇದೀಗ ಕೇವಲ 'ನಾಮಫಲಕ'ಕ್ಕೆ
ಸೀಮಿತವಾಗಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ
ಕೇಳಿಬರುತ್ತಿದೆ.
ರಾಜ್ಯದ
ಮುಖ್ಯಮಂತ್ರಿಗಳೇ ಖುದ್ದಾಗಿ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದರೂ, ಆಸ್ಪತ್ರೆ ಮಾತ್ರ ಇಂದಿಗೂ ಜನರ ಸೇವೆಗೆ ಲಭ್ಯವಾಗುತ್ತಿಲ್ಲ. ಇದು ಸರಕಾರದ
ನಿರ್ಲಕ್ಷ್ಯವೋ ಅಥವಾ ತಾಲೂಕು ಆಡಳಿತದ ವೈಫಲ್ಯವೋ?
- ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ನಿರ್ಮಿಸಲಾದ ಈ
ಆಸ್ಪತ್ರೆಗೆ ಸರಕಾರ ಕೋಟಿಗಟ್ಟಲೆ ಹಣವನ್ನು ವೆಚ್ಚ ಮಾಡಿದೆ.
- ತುರ್ತು ಸಂದರ್ಭದಲ್ಲಿ ಬಡ ತಾಯಂದಿರು ಜಿಲ್ಲಾ ಆಸ್ಪತ್ರೆಗೆ ಅಲೆದಾಡುವ ದುಸ್ಥಿತಿ
ಮುಂದುವರೆದಿದೆ. ಹೊಸದಾಗಿ ನಿರ್ಮಿಸಿದ ಆಸ್ಪತ್ರೆ ಇದ್ದರೂ, ವೈದ್ಯಕೀಯ ಸೇವೆ ಮಾತ್ರ ಮರೀಚಿಕೆಯಾಗಿದೆ.
- ಉದ್ಘಾಟನೆಯಾಗಿ ಸುಮಾರು 5 ತಿಂಗಳುಗಳು ಕಳೆದರೂ, ಆಸ್ಪತ್ರೆಗೆ ಅಗತ್ಯವಿರುವ
ಸಿಬ್ಬಂದಿ ನೇಮಕಾತಿ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯ ನೆಪವೊಡ್ಡಿ ಆಸ್ಪತ್ರೆಯನ್ನು
ತೆರೆಯದೆ ಇರುವುದು ಖಂಡನೀಯ.
"ಮುಖ್ಯಮಂತ್ರಿಗಳೇ ಬಂದು ಉದ್ಘಾಟನೆ ಮಾಡಿದ
ಮೇಲೆ ಇನ್ನು ತಡವೇಕೆ? ಕಟ್ಟಡ ಸಿದ್ಧವಾಗಿದೆ, ಯಂತ್ರೋಪಕರಣಗಳಿವೆ, ಆದರೆ ರೋಗಿಗಳಿಗೆ ಚಿಕಿತ್ಸೆ ನೀಡುವ
ಮನಸ್ಥಿತಿ ಮಾತ್ರ ಆಡಳಿತ ವರ್ಗಕ್ಕೆ ಇಲ್ಲವೇ?" ಎಂದು ಸ್ಥಳೀಯರು
ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು, ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಿ, ತಾಯಿ ಮತ್ತು ಮಕ್ಕಳ
ಆಸ್ಪತ್ರೆಯನ್ನು ತುರ್ತಾಗಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕು.
ಬರಹ:
- ಕಿರಣ್ ದಾನಿ (ರಣಗಲ್ ನ್ಯೂಸ್ ಸಂಸ್ಥಾಪಕರು)
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
