ಕುಷ್ಟಗಿ-ಬೆಂಗಳೂರು ನೇರ ರೈಲು - ನಮ್ಮ ಹಕ್ಕು, ಇನ್ನು ಮೌನವೇಕೆ?"ಅಭಿವೃದ್ಧಿ ಎಂದರೆ ಕಾಂಕ್ರೀಟ್ ಕಟ್ಟಡಗಳಲ್ಲ, ಜನರ ಕಷ್ಟಗಳಿಗೆ ಸ್ಪಂದಿಸುವ ವ್ಯವಸ್ಥೆ."
ಕುಷ್ಟಗಿಯಿಂದ ಹುಬ್ಬಳ್ಳಿಗೆ ರೈಲು ಸಂಪರ್ಕ ಸಿಕ್ಕಿ ಒಂದು ವರ್ಷ ಕಳೆದಿದೆ. ಈ ಭಾಗದ ಜನರ ಬಹುಕಾಲದ ಕನಸಿನ ಮೊದಲ ಮೆಟ್ಟಿಲು ಏರಿದ ಸಂತಸ ನಮ್ಮಲ್ಲಿದೆ. ಆದರೆ, ಜೀವನಾಡಿಯಾದ 'ಬೆಂಗಳೂರು ಸಂಪರ್ಕ' ಮಾತ್ರ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು ಮತ್ತು ವ್ಯಾಪಾರಿಗಳು ಪ್ರತಿನಿತ್ಯ ಬೆಂಗಳೂರು ತಲುಪಲು ಕೊಪ್ಪಳ, ಹೊಸಪೇಟೆ, ರಾಯಚೂರು ಅಥವಾ ಗದಗಕ್ಕೆ ಅಲೆದಾಡಿ ಅನುಭವಿಸುತ್ತಿರುವ ನರಕಯಾತನೆ ಯಾರಿಗೆ ಗೊತ್ತು? ಕಿಕ್ಕಿರಿದ ಬಸ್ಸಿನಲ್ಲಿ, ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾಯುವದಲ್ಲದೆ ಹಲವಾರು ತೊಂದರೆಗಳನ್ನು ಅನುಭವಿಸುವುದೇ ನಮ್ಮಗಳ ನೋವಾಗಿದೆ, ಈ ಕಷ್ಟ ನಮ್ಮದು!
- ಒಗ್ಗಟ್ಟೇ ಶಕ್ತಿ, ಒಡಕೇ
ಸೋಲು; ಕುಷ್ಟಗಿ ರೈಲ್ವೆ ಹೋರಾಟದ ವಿಚಾರದಲ್ಲಿ ಈ
ಮಾತು ಅಕ್ಷರಶಃ ಸತ್ಯ. ಹೋರಾಟ ಸಮಿತಿಗಳಲ್ಲಿ ಸಮನ್ವಯದ ಕೊರತೆ ಮತ್ತು ವ್ಯಕ್ತಿಗತ ಹಿತಾಸಕ್ತಿಗಳು
ನಮ್ಮ ಅಭಿವೃದ್ಧಿಗೆ ಅಡ್ಡಗಾಲಾಗುತ್ತಿವೆಯೇ ಎಂಬ ಪ್ರಶ್ನೆ ಇಂದು ಸಾಮಾನ್ಯ ನಾಗರಿಕರನ್ನು
ಕಾಡುತ್ತಿದೆ. ನಾವೆಲ್ಲರೂ ಪಕ್ಷಾತೀತವಾಗಿ 'ಕುಷ್ಟಗಿಯ ನಾಗರಿಕರು'
ಎಂಬುದನ್ನು ಮರೆತಾಗ ಇಂತಹ ಸೋಲುಗಳು ಖಚಿತ. ಹೋರಾಟಗಾರರ ಭಿನ್ನಾಭಿಪ್ರಾಯಗಳು ಊರಿನ
ಹಿತಾಸಕ್ತಿಗಿಂತ ದೊಡ್ಡದಾಗಬಾರದು.
- ಪತ್ರಕರ್ತರ ಸಂಕಲ್ಪ – ಬದಲಾವಣೆಯ ಹರಿಕಾರರು;
ನಾವು ಪತ್ರಕರ್ತರು ಕೇವಲ ಸುದ್ದಿ ನೀಡುವವರಲ್ಲ, ಬದಲಾವಣೆಯ ಹರಿಕಾರರು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ,
"ಕುಷ್ಟಗಿಯಿಂದ ಬೆಂಗಳೂರಿಗೆ ನೇರ ರೈಲು ಬೇಕು" ಎನ್ನುವುದನ್ನೇ
ಅಜೆಂಡಾವಾಗಿ ಇಟ್ಟುಕೊಳ್ಳುವ ಸಮಯ ಬಂದಿದೆ. ರೈಲು ಬರುವವರೆಗೂ ತಣ್ಣಗಾಗುವುದಿಲ್ಲ ಎಂಬ ಶಪಥವನ್ನು
ಮಾಡಿದ್ದೇವೆ. ಆದರೆ, ಈ ಹೋರಾಟಕ್ಕೆ ಶಕ್ತಿ ತುಂಬುವುದು ನೀವೇ –
ಕುಷ್ಟಗಿಯ ನಾಗರಿಕರು.
- ಇನ್ನು ಮೌನವೇಕೆ?; ರೈಲ್ವೆ ಹೋರಾಟ ಸಮಿತಿಯಲ್ಲಿ ಯಾರು ಇದ್ದಾರೆ, ಯಾರು ಇಲ್ಲ ಎಂಬುದು ಮುಖ್ಯವಲ್ಲ. ನಮ್ಮ ಕಷ್ಟಕ್ಕೆ ಸರ್ಕಾರ ಬಾಗಿಲು ಬಡಿಯುವುದಿಲ್ಲ;
ನಾವೇ ಸರ್ಕಾರದ ಬಾಗಿಲು ಬಡಿಯಬೇಕು. ಮೌನವೇ ರೈಲ್ವೆ ಇಲಾಖೆಯ ನಿರ್ಲಕ್ಷ್ಯಕ್ಕೆ
ನೀರೆರೆಯುತ್ತಿದೆ.
- ಇದು ರೈಲು ಕೇಳುವ ಪ್ರಶ್ನೆಯಲ್ಲ; ಗೌರವದ ಪ್ರಶ್ನೆ.
- ಮಕ್ಕಳ ಭವಿಷ್ಯ, ವೃದ್ಧರ ಆರೋಗ್ಯ
ಮತ್ತು ಉದ್ಯೋಗಿಗಳ ನೆಮ್ಮದಿಗಾಗಿ ಈ ರೈಲು ಅನಿವಾರ್ಯ.
- ನಾಗರಿಕರೇ ಎಚ್ಚರಗೊಳ್ಳಿ! ಸ್ವಾರ್ಥದ
ಸಂಕೋಲೆಗಳನ್ನು ಕಳಚಿ, ಒಗ್ಗಟ್ಟಿನ ಮಂತ್ರ ಜಪಿಸಿ.
ಯಾವುದೇ ಹಂಗಿಲ್ಲದೆ ನಾವೆಲ್ಲರೂ ಒಂದಾಗೋಣ. ನಿಮ್ಮ ಸಣ್ಣ ಬೆಂಬಲವೇ ಈ ಹೋರಾಟವನ್ನು
ಮಹಾಕ್ರಾಂತಿಯನ್ನಾಗಿ ಮಾಡಬಲ್ಲದು. ಬೆಂಗಳೂರಿಗೆ ನೇರ ರೈಲು ಬೇಕೇ ಬೇಕು – ಇದು ಇನ್ನು
ಘೋಷಣೆಯಲ್ಲ, ಹಕ್ಕಿನ ಕೂಗಾಗಲಿ!
ಈ
ನಿಟ್ಟಿನಲ್ಲಿ ಪತ್ರಕರ್ತರ ಜವಾಬ್ದಾರಿ ಪ್ರಮುಖವೆಂದೆನಿಸುತ್ತಿದೆಯೇ?
ಬರಹ:
- ಕಿರಣ್ ದಾನಿ (ರಣಗಲ್ ನ್ಯೂಸ್ ಸಂಸ್ಥಾಪಕರು)
All Rights Reserved: The complete rights of this column belong to 'RanagalNewz'. Republishing parts or the entirety of this article without prior permission is unlawful. Copyright © 2026
%20(1).jpeg)